

ಮಂಡ್ಯ: ರೈತರು ತಮ್ಮ ರಾಸುಗಳಿಗೆ ಜೀವ ವಿಮೆ ಮಾಡಿಸಿದರೆ ಅನಾಹುತವಾದಾಗ ಆರ್ಥಿಕ ನಷ್ಟದ ಹೊರೆ ಕಡಿಮೆ ಮಾಡಿಕೊಳ್ಳಬೇಕು ಎಂದು ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ಹೇಳಿದರು.
ತಾಲೂಕಿನ ಕೊತ್ತತ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯ ನಂದಿನಿ ಸಭಾಂಗಣದಲ್ಲಿ ಮನ್‌ಮುಲ್ ವತಿಯಿಂದ ಬುಧವಾರ ಆಯೋಜಿಸಿದ್ದ 2022-23ನೇ ಸಾಲಿನ ಜಾನುವಾರು ವಿಮಾ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಹಾಲು ಉತ್ಪಾದಕರು ಕಡ್ಡಾಯವಾಗಿ ತಮ್ಮ ರಾಸುಗಳಿಗೆ ಆರೋಗ್ಯ ವಿಮೆ ಮಾಡಿಸಬೇಕು ಸಲಹೆ ನೀಡಿದರು.
ತಮ್ಮನ್ನು ಕಾಪಾಡುವ ರಾಸುಗಳಿಗೂ ಆರೋಗ್ಯ ಸಮಸ್ಯೆಗಳುಂಟಾಗಿ ಮೃತಪಟ್ಟರೆ ತಮ್ಮ ಭವಿಷ್ಯಕ್ಕೆ ಮಾರಕವಾಗಲಿದೆ. ಆದ್ದರಿಂದ ರೈತರು ತಮ್ಮ ರಾಸುಗಳಿಗೆ ವಿಮೆ ಮಾಡಿಸುವ ಮೂಲಕ ಅಕ್ಕ ಪಕ್ಕದವರಿಗೂ ಹೇಳಿ ರಾಸು ವಿಮೆ ಮಾಡಿಸಲು ಅರಿವು ಮೂಡಿಸಿ ಎಂದು ಹೇಳಿದರು.
ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್. ರಘುನಂದನ್ ಮಾತನಾಡಿ, ಪ್ರತಿಯೊಬ್ಬ ರೈತರು ಶಕ್ತಿ ಮೀರಿ ತಮ್ಮ ತಮ್ಮ ಗ್ರಾಮಗಳಲ್ಲಿ ತಪ್ಪದೇ ರಾಸು ವಿಮೆ ಮಾಡಿಸಿ. ವಿವಿಧ ಯೋಜನೆಗಳನ್ನ ಹಾಕಿಕೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಉತ್ಪಾದಕರಿಗೆ ಮ್ಯಾಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ನಾಲ್ಕನೇ ಸ್ಥಾನದಲ್ಲಿರುವ ಹಾಲು ಒಕ್ಕೂಟವನ್ನು ಒಂದನೇ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
ಮನ್‌ಮುಲ್ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್, ಪ್ರಭಾಕರ್, ಡಾ.ಮಂಜೇಶ್‌ಗೌಡ, ಎಸ್.ತಮ್ಮಣ್ಣ, ರಮೇಶ್, ಜಗದೀಶ್, ಪ್ರತಾಪ್, ರಶ್ಮಿ ಇತರರಿದ್ದರು.