

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್)ದಲ್ಲಿ ಇತ್ತೀಚೆಗೆ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ನಿಯಮವನ್ನು ಗಾಳಿಗೆ ತೂರುವುದರ ಜತೆಗೆ ಹಲವರು ಸುಳ್ಳು ದಾಖಲೆ ಕೊಟ್ಟು ಹುದ್ದೆ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ ಈವರೆಗೆ ಒಕ್ಕೂಟದಲ್ಲಿ 651 ಕೋಟಿ ರೂ ಅವ್ಯವಹಾರ ನಡೆದಿದ್ದು, ಈ ಎಲ್ಲದರ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದೆ.
ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂಗೆ ಭೇಟಿ ಮಾಡಿದ ನಿಯೋಗದ ಸದಸ್ಯರು, ಒಕ್ಕೂಟದಲ್ಲಿ ನಡೆದಿರುವ ನೇಮಕಾತಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪ್ರತಿ ಹುದ್ದೆಯನ್ನು ಲಕ್ಷಾಂತರ ರೂ ಮಾರಾಟ ಮಾಡಿಕೊಳ್ಳಲಾಗಿದೆ ಎನ್ನುವ ಗಂಭೀರ ಆರೋಪಗಳಿವೆ. ಇದಲ್ಲದೆ ಈವರೆಗೆ ಹಲವು ಹಗರಣ ನಡೆದಿದ್ದು, ಅದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು 160 ಪುಟಗಳ ದೂರನ್ನು ಸಲ್ಲಿಸಲಾಗಿದೆ. ಮಾತ್ರವಲ್ಲದೆ ಸೂಪರ್‌ಸೀಡ್ ಮಾಡುವ ಮೂಲಕ ಆಡಳಿತ ಮಂಡಳಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.
ಇನ್ನು ಮೇಗಾಡೇರಿ ನಿರ್ಮಾಣ ವಿಚಾರದಲ್ಲಿಯೂ ಹಲವು ನಿಯಮವನ್ನು ಗಾಳಿಗೆ ತೋರಲಾಗಿದೆ. ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ಹಣ ಕೊಟ್ಟು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಭೂಮಿ ಖರೀದಿ ಮಾಡಲಾಗಿದೆ. ಅಂತೆಯೇ ಟೆಂಡರ್ ಮಾಡಿರುವ ವಾಹನವೇ ಬೇರೆಯಾಗಿದ್ದು, ಹಾಲನ್ನು ಸರಬರಾಜು ಮಾಡುತ್ತಿರುವ ವಾಹನವೇ ಬೇರೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಗರಣದಲ್ಲಿ ಕ್ರಮವಾಗಿಲ್ಲ: ಹಾಲಿಗೆ ನೀರು ಮಿಶ್ರಣ ಮಾಡಿ ಕೋಟ್ಯಂತರ ರೂ ಅವ್ಯವಹಾರ ಮಾಡಿದ್ದ ಪ್ರಕರಣದ ಬಗ್ಗೆ ಸಿಎಂ ಭೇಟಿ ಮಾಡಿ ನಿಯೋಗ ಗಮನ ಸೆಳೆದಿದೆ. ಆ ಪ್ರಕರಣ ರಾಜ್ಯದಲ್ಲಿಯೇ ಗಮನಸೆಳೆದಿತ್ತು. ಆದರೂ ಈವರೆಗೂ ಯಾರ ವಿರುದ್ಧವೂ ಕ್ರಮವಾಗಿಲ್ಲ. ಆದ್ದರಿಂದ ಉನ್ನತಮಟ್ಟದ ತನಿಖೆಯ ಅಗತ್ಯವಿದೆ. ಈ ಬಗ್ಗೆ ತುರ್ತು ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.
ತನಿಖೆ ನಡೆಸುವುದು ಖಚಿತ: ನಿಯೋಗದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮನ್‌ಮುಲ್ನಲ್ಲಿ ನಡೆದಿರುವ ಹಾಲಿಗೆ ನೀರು ಮಿಶ್ರಣ ಸೇರಿದಂತೆ ಹಲವು ಹಗರಣಗಳ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಸ್ತಾಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಖಂಡಿತವಾಗಿಯೂ ಮನ್‌ಮುಲ್ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇನೆಂದು ತಿಳಿಸಿದ್ದಾರೆ.
ನಿಯೋಗದಲ್ಲಿ ಕಿಸಾಸ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್, ಪಾಂಡವಪುರ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕೆಪಿಸಿಸಿ ಸದಸ್ಯೆ ವಿಜಯಲಕ್ಷ್ಮೀ ರಘುನಂದನ್, ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಕೊತ್ತತ್ತಿ ರಾಜು, ರಾಮಕೃಷ್ಣ, ಮಳವಳ್ಳಿ ನಾಗರಾಜು, ವೀಣಾ ಶಂಕರ್, ದೇವಪ್ಪ, ಸಾತನೂರು ಕೃಷ್ಣ, ಗುರುರಾಜು, ಕೆ.ವಿ.ರಾಮೇಗೌಡ, ಚಂದ್ರು, ಬೋರೇಗೌಡ, ಹೊಳಲು ಶಿವರಾಜು, ಜಿಲ್ಲಾ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ ಇತರರಿದ್ದರು.