ಮಂಡ್ಯ: ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮನ್‌ಮುಲ್‌ನಲ್ಲಿ ಅಧಿಕಾರದಲ್ಲಿರುವವರು ಒಂದೊಂದು ಹುದ್ದೆಯನ್ನು ಲಕ್ಷಾಂತರ ರೂಗೆ ಮಾರಾಟ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಗಂಭೀರ ಆರೋಪ ಮಾಡಿದರು.
ತಾಲೂಕಿನ ಹಳೆ ಬೂದನೂರು, ಹೊಸ ಬೂದನೂರು, ಮುದ್ದುಂಗೆರೆ, ಡಣಾಯಕನಪುರ ಗ್ರಾಮದಲ್ಲಿ ಶನಿವಾರ ಮತಯಾಚನೆ ಮಾಡಿದ ಅವರು, ಶಾಸಕರಾಗಲು ಮನ್‌ಮುಲ್ ನಿರ್ದೇಶಕ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಣಕ್ಕೆ ಹುದ್ದೆ ಮಾರಾಟ ಮಾಡಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಇಂತಹವರಿಗೆ ಜನರೇ ತಕ್ಕಪಾಠ ಕಲಿಸಬೇಕಿದೆ. ನಾವು ಬದಲಾಗದೆ ವ್ಯವಸ್ಥೆ ಬದಲಾಗದು. ಬದಲಾವಣೆಯ ಮನಸ್ಸು ಹೊಂದಿರುವ ನನಗೆ ನಿಮ್ಮೆಲ್ಲರ ಆಶೀರ್ವಾದ ಅತ್ಯಾವಶ್ಯಕವಾಗಿ ಬೇಕಾಗಿದೆ ಎಂದರು.
ಉತ್ತಮರನ್ನು ಆಯ್ಕೆಗೊಳಿಸದಿದ್ದರೆ ಅಸಿಟೆಟ್ ಫ್ಯಾಕ್ಟರಿ ಹಾಳಾದ ರೀತಿ ಮೈಷುಗರ್, ಮನ್‌ಮುಲ್ ಆಗುವ ದಿನ ದೂರವಿಲ್ಲ. ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಹಂಬಲ ಹೊಂದಿರುವ ನನಗೆ ಅವಕಾಶ ನೀಡಿ. ಒಂದು ವೇಳೆ ನನಗಿಂತ ಅರ್ಹತೆಯಲ್ಲಿ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಉತ್ತಮವಾದ ಅಭ್ಯರ್ಥಿ ಇದ್ದರೆ ಅವರನ್ನು ಬೆಂಬಲಿಸಿ. ಆದರೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಹಣ, ಹೆಂಡದ ಹೊಳೆಹರಿಸುವ ಯಾವುದೇ ಅಭ್ಯರ್ಥಿಗಳಿಗೆ ತಮ್ಮ ಅತ್ಯಮೂಲ್ಯವಾದ ಮತ ಕೊಡಬೇಡಿ. ಇದರಿಂದ ನಮ್ಮ ಭವಿಷ್ಯದ ಪೀಳಿಗೆ ನಷ್ಟ ಅನುಭವಿಸುತ್ತದೆ ಎಂದು ಮನವಿ ಮಾಡಿದರು.
ಈ ವೇಳೆ ಬೂದನೂರು ಸುನೀಲ್, ರವಿಕುಮಾರ್, ಡಾಬಾ ಸುರೇಶ, ರಾಜಶೇಖರ, ಹರೀಶ್, ಚಂದ್ರು, ನಿಂಗೇಗೌಡ, ಕಾಂತರಾಜ, ಶ್ರೀಕಾಂತ್, ಶಶಿಧರ್ ಇತರರಿದ್ದರು.