ಮನ್ಮುಲ್ ಎಲೆಕ್ಷನ್ ವಿದೇಶಿ ಪ್ರವಾಸ?: ಜಿಲ್ಲೆಯಲ್ಲಿ ಗುಸುಗುಸು ಮಾತು

Manmul Election for the post of Director Mandya
module: a; hw-remosaic: 0; touch: (0.5489583, 0.5489583); modeInfo: ; sceneMode: Auto; cct_value: 0; AI_Scene: (-1, -1); aec_lux: 138.0; hist255: 0.0; hist252~255: 0.0; hist0~15: 0.0;
Published on

ಮಂಡ್ಯ: ಹಾಲಿಗೆ ನೀರು ಸೇರಿಸಿ ಭ್ರಷ್ಟಾಚಾರ ಹಗರಣ, ನೇಮಕಾತಿಯಲ್ಲಿ ಲೋಪವೆನ್ನುವ ಆರೋಪ ಹೊತ್ತುಕೊಂಡಿದ್ದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್)ದ ಆಡಳಿತ ಮಂಡಳಿಯ ಅಧಿಕಾರಾವಧಿ ಅಂತ್ಯಗೊಂಡಿದೆ.

ಅಂತೆಯೇ ನೂತನ ಆಡಳಿತ ಮಂಡಳಿ ರಚನೆಗೆ ಅಖಾಡ ಸಿದ್ಧವಾಗಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಅದಾಗಲೇ ಸಿದ್ಧತೆಯೂ ಪ್ರಾರಂಭಗೊಂಡಿದೆ. ಈ ನಡುವೆ ಸ್ಪರ್ಧಾಕಾಂಕ್ಷಿಗಳು ಹಾಗೂ ಪ್ರಭಾವಿ ಮುಖಂಡರು ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆನ್ನುವ ಗುಸುಗುಸು ಮಾತು ಕೇಳಿಬರುತ್ತಿವೆ.

ಟೀಕೆಗೆ ಗುರಿಯಾಗಿದ್ದ ಆಡಳಿತ: ಕಳೆದ ಸಾಲಿನ ಆಡಳಿತ ಮಂಡಳಿ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿತ್ತು. ಮುಖ್ಯವಾಗಿ ಹಾಲಿಗೆ ನೀರು ಸೇರಿ ನೂರಾರೂ ಕೋಟಿ ರೂ.ಗಳನ್ನು ಅವ್ಯವಹಾರ ಮಾಡಿದ್ದಾರೆನ್ನುವ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಮಾತ್ರವಲ್ಲದೆ ಈ ಬಗ್ಗೆ ಸಾಕಷ್ಟು ಹೋರಾಟವೂ ನಡೆದಿದ್ದವು. ಪರಿಣಾಮ ಪ್ರಕರಣದ ತನಿಖೆ ಸಿಐಡಿ ಹೆಗಲೇರಿತ್ತಾದರೂ ಮುಂದೆನಾಯ್ತು ಎನ್ನುವ ಮಾಹಿತಿ ಇಂದಿಗೂ ಹೊರಬಿದ್ದಿಲ್ಲ. ಇದಲ್ಲದೆ ಅವಶ್ಯಕವಿಲ್ಲದಿದ್ದರೂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಪ್ರತಿ ಹುದ್ದೆಗೂ ಲಕ್ಷಾಂತರ ರೂ ಪಡೆಯಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಕಳೆದ ಸಾಲಿನಲ್ಲಿ ಮೊದಲ ಅವಧಿಯಲ್ಲಿ ಅಧಿಕಾರ ಜೆಡಿಎಸ್ ತೆಕ್ಕೆಯಲ್ಲಿತ್ತು. ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಎರಡನೇ ಅವಧಿ ಕಾಂಗ್ರೆಸ್ ಪಾಲಾಯಿತು.

ಮನ್‌ಮುಲ್ ಬಗ್ಗೆ ಒಂದಿಷ್ಟು: 1987ರಲ್ಲಿ ಮನ್‌ಮುಲ್ ನೋಂದಾಯಿಸಲಾಯಿತು. ಇದಕ್ಕೂ ಮೊದಲು ಮೈಸೂರು ಮತ್ತು ತುಮಕೂರು ಹಾಲು ಒಕ್ಕೂಟ ಮಂಡ್ಯ ಜಿಲ್ಲೆಯ ಡೇರಿಗಳಿಂದ ಹಾಲನ್ನು ಸಂಗ್ರಹಿಸುತ್ತಿತ್ತು. ಮನ್‌ಮುಲ್ ಪ್ರಾರಂಭವಾದಾಗ 410 ಡೇರಿಯಲ್ಲಿ ಪ್ರತಿದಿನಕ್ಕೆ 99 ಸಾವಿರ ಲೀಟರ್‌ನಷ್ಟು ಹಾಲನ್ನು ಸಂಗ್ರಹಣೆ ಮಾಡುತ್ತಿತ್ತು.

ಆದರೀಗ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿ ವಿಸ್ತಾರಗೊಂಡಿದೆ. ಪ್ರಸ್ತುತ 1289 ಡೇರಿ ಮೂಲಕ ಪ್ರತಿನಿತಯ್ಯ 9.45 ಲಕ್ಷ ಲೀ.ನಷ್ಟು ಹಾಲನ್ನು ಪಡೆಯಲಾಗುತ್ತಿದೆ. ಒಂದು ರೀತಿಯಲ್ಲಿ ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿಕೊಂಡಿರುವವರಿಗೆ ಮನ್‌ಮುಲ್ ಆಧಾರವಾಗಿದೆ. ಈ ಹಿನ್ನೆಲೆಯಲ್ಲಿ ಮನ್ಮುಲ್‌ನ ಅಧಿಕಾರ ಹಿಡಿಯುವುದು ಪ್ರತಿಷ್ಠೆಯಾಗಿದೆ.

12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ: ಪ್ರತಿಷ್ಠಿತ ಮನ್‌ಮುಲ್‌ನಲ್ಲಿ 12 ನಿರ್ದೇಶಕ ಸ್ಥಾನವಿದೆ. ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣದಲ್ಲಿ ತಲಾ ಒಂದು, ಕೆ.ಆರ್.ಪೇಟೆ, ನಾಗಮಂಗಲ, ಮದ್ದೂರು ತಾಲೂಕಿನಲ್ಲಿ ತಲಾ ಎರಡು ಹಾಗೂ ಮಂಡ್ಯ ತಾಲೂಕಿಗೆ ಮೂರು ಸ್ಥಾನವಿರಲಿದೆ. ಕಳೆದ ಸಾಲಿನಲ್ಲಿ ಜೆಡಿಎಸ್ 8 ಸ್ಥಾನ, ಕಾಂಗ್ರೆಸ್ 3 ಹಾಗೂ ಬಿಜೆಪಿ ಒಂದು ಸ್ಥಾನ ಗೆದ್ದುಗೊಂಡಿತ್ತು. ಆದರೆ ಜಿಲ್ಲೆಯಲ್ಲಿ ನಡೆದ ರಾಜಕಾರಣ ಧ್ರುವೀಕರಣದಿಂದಾಗಿ ಪಕ್ಷಾಂತರ ಪರ್ವ ನಡೆದಿದ್ದವು.

ಗಮನಾರ್ಹ ಅಂಶವೆಂದರೆ ಕಳೆದ ಆಡಳಿತ ಮಂಡಳಿಯಲ್ಲಿ ಹಾಲಿ ನಿರ್ದೇಶಕರಾಗಿದ್ದ ಮೂವರು 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿದಿದ್ದರು. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಬಿ.ಆರ್.ರಾಮಚಂದ್ರು ಹಾಗೂ ಕೆ.ಆರ್.ಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಟಿ.ಮಂಜು ಮತ್ತು ಮದ್ದೂರು ಕ್ಷೇತ್ರದಿಂದ ಬಿಜೆಪಿಯಿಂದ ಎಸ್.ಪಿ.ಸ್ವಾಮಿ ಸ್ಪರ್ಧೆ ಮಾಡಿದ್ದರು. ಈ ಪೈಕಿ ಎಚ್.ಟಿ.ಮಂಜು ಚುನಾವಣೆಯಲ್ಲಿ ಗೆದ್ದು ಶಾಸಕರಾದರು. ಇನ್ನು ಈ ಬಾರಿಯೂ ಮನ್‌ಮುಲ್‌ನಲ್ಲಿ ಸ್ಪರ್ಧೆ ಮಾಡುವುದಾಗಿ ಮಂಜು ಈಗಾಗಲೇ ಘೋಷಣೆ ಮಾಡಿದ್ದಾರೆ.

2025 ಫೆ.2ರಂದು ಮತದಾನ: 2025ರಿಂದ 2029ರವರೆಗಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅ.18ರಂದು ಚುನಾವಣೆಯ ಅಧಿಸೂಚನೆ ಹೊರಡಿಸಿದ್ದಾರೆ.

ಅದರಂತೆ 2025 ಜ.25ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 26ರಂದು ಉಮೇದುವಾರಿಕೆ ಪರಿಶೀಲನೆ, 27ರಂದು ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿರಲಿದೆ. ಅಗತ್ಯವಿದ್ದಲ್ಲಿ 2025 ಫೆ.2ರಂದು ಮತದಾನ ನಡೆಯಲಿದೆ.

ಸಿದ್ಧವಾಗುತ್ತಿರುವ ತಂತ್ರಗಾರಿಕೆ: ಮನ್‌ಮುಲ್ ಅಧಿಕಾರ ಹಿಡಿಯಲು ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ತಂತ್ರಗಾರಿಕೆ ನಡೆಯುತ್ತಿದೆ. ಅದರಂತೆ ಈಗಾಗಲೇ ಕೆಲವರು ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆಂದು ತಿಳಿದುಬಂದಿದೆ. ಇನ್ನು ಈ ಚುನಾವಣೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಪ್ರತಿಷ್ಠೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಚುನಾವಣಾ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಅದರಂತೆ ಸಚಿವ ಚಲುವರಾಯಸ್ವಾಮಿ ಮೊದಲ ಹಂತದಲ್ಲಿ ಸಭೆ ಮಾಡಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖಂಡರಿಗೆ ಸೂಚನೆ ರವಾನಿಸಿದ್ದಾರೆ.

ಇನ್ನು ಕಳೆದ ಚುನಾವಣೆಯಲ್ಲಿ ಗೆದ್ದಿರುವ ಹಾಗೂ ಸೋಲು ಅನುಭವಿಸುವವರೇ ಪ್ರಮುಖ ಆಕಾಂಕ್ಷಿತರಾಗಿದ್ದು, ಮತ್ತೊಮ್ಮೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಇದರ ಜತೆಗೆ ಹೊಸಬರು ಕೂಡ ಸ್ಪರ್ಧೆಗಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಗಮನಾರ್ಹ ವಿಷಯವೆಂದರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮನ್‌ಮುಲ್ ಚುನಾವಣೆಯಲ್ಲಿಯೂ ಮುಂದುವರೆಯಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.

ಕಳೆದ ಸಾಲಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮದ್ದೂರು ತಾಲೂಕು ರೂಪಾ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಇದಾದ ಬಳಿಕ ಎಸ್.ಪಿ.ಸ್ವಾಮಿ ಜೆಡಿಎಸ್ ಬೆಂಬಲಿತರಾಗಿ ಆಯ್ಕೆಯಾದರೂ ಕೆಲವೇ ತಿಂಗಳಲ್ಲಿ ಬಿಜೆಪಿ ಸೇರಿದರು. ಇದರಿಂದಾಗಿ ಬಿಜೆಪಿ ಬೆಂಬಲಿತರ ಸಂಖ್ಯೆ ಎರಡಕ್ಕೇರಿತ್ತು. ಆದ್ದರಿಂದ ಈ ಬಾರಿ ಮೈತ್ರಿ ಮುಂದುವರೆದರೆ ಜೆಡಿಎಸ್ ಮತ್ತು ಬಿಜೆಪಿಗೆ ಎಷ್ಟು ಸ್ಥಾನ ಹಂಚಿಕೆಯಾಗಲಿದೆ ಎನ್ನುವುದನ್ನು ಕುತೂಹಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net