ಬಿಜೆಪಿ ಪಕ್ಷ ತ್ಯಜಿಸುವ ಪ್ರಶ್ನೆಯೇ ಇಲ್ಲ: ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಸ್ಪಷ್ಟನೆ

Manmul Director Press Conference Mandya
Published on

ಮಂಡ್ಯ: ಮನ್‌ಮುಲ್ ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆಂದು ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂದು ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಸ್ಪಷ್ಟಪಡಿಸಿದರು.

ನನ್ನ ನಿಷ್ಠೆ ಏನಿದ್ದರೂ ಬಿಜೆಪಿಗೆ ಹೊರತು ಬೇರೆ ಪಕ್ಷಕ್ಕೆ ಅಲ್ಲ. ಒಂದು ವೇಳೆ ಪಕ್ಷ ಬಿಡುವ ಸಂದರ್ಭದ ಎದುರಾದರೇ ರಾಜಕೀಯದಿಂದಲೇ ಹೊರಗುಳಿಯುತ್ತೇನೆ. ಆದ್ದರಿಂದ ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗದೆ ಪಕ್ಷದಲ್ಲಿ ಹಿಂದೆ ಇದ್ದಂತಹ ಸಹಕಾರವೇ ಇರಲಿದೆ ಎಂಬ ಎಂಬ ವಿಶ್ವಾಸ ಇದೆ. ಅದೇ ರೀತಿ ನಾನೂ ಸಹ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮನ್‌ಮುಲ್ ನಿರ್ದೇಶಕರನ್ನಾಗಿ ಎರಡನೇ ಬಾರಿಗೆ ಆಯ್ಕೆ ಮಾಡಿದ್ದ ಮದ್ದೂರು ತಾಲೂಕಿನ ಎಲ್ಲ ಸಹಕಾರಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೆಲವರ ಕುತಂತ್ರದಿಂದಾಗಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತನಾಗಿ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ. ಆದರೂ ನಾನು ಎದೆಗುಂದದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೆಲುವು ಸಾಧಿಸಿದ್ದೇನೆ. ಇದಕ್ಕೆ ಪಕ್ಷದ ಯಾರನ್ನು ಹೊಣೆಯಾಗಿಸುವುದಿಲ್ಲ. ಬಿಜೆಪಿಗೆ ಪದಾರ್ಪಣೆ ಮಾಡಿದಾಗಿನಿಂದಲೂ ನಿಷ್ಠೆ, ಪ್ರಾಮಾಣಿಕತೆಯಿಂದ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಇದರಲ್ಲಿ ಯಾವುದೇ ತೊಡಕು ಉಂಟಾಗಿಲ್ಲ. ಆದರೆ ಕೆಲವರಿಂದಾಗಿ ಈ ಬಾರಿ ಇಂತಹ ಕಹಿ ಘಟನೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳೂ ಸಹ ಪಕ್ಷದ ವರಿಷ್ಠರ ಗಮನಕ್ಕೂ ಬಂದಿದೆ. ಮುಂದೆಯೂ ಸಹ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಜಿ.ಪಂ ಮಾಜಿ ಸದಸ್ಯ ಬೋರಯ್ಯ, ಎಂಡಿಸಿಸಿ ಮಾಜಿ ನಿರ್ದೇಶಕ ಪ್ರಕಾಶ್, ಮನು, ಪ್ರಸನ್ನ, ಕೃಷ್ಣ, ನಾಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net