ಸ್ವಾಭಾವಿಕ ಸಂಪನ್ಮೂಲ ಸಂರಕ್ಷಿಸಿ ; ಜಿಲ್ಲೆಯಲ್ಲಿ ಮನರೇಗಾ ಅನುಷ್ಠಾನಗಳ ಮಾಹಿತಿ

OLYMPUS DIGITAL CAMERA
OLYMPUS DIGITAL CAMERA
Published on

ತುಮಕೂರು : ಜಿಲ್ಲೆಯಲ್ಲಿ ಮನರೇಗಾ ಯೋಜನೆಯಡಿ ಜೂನ್ ಅಂತ್ಯಕ್ಕೆ 14.53 ಲಕ್ಷ ವಾನವ ದಿನಗಳ ಸೃಜನೆ ಮಾಡಲಾಗಿದೆ ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಜಲಶಕ್ತಿ ಅಭಿಯಾನ ಹಾಗೂ ಅಂತರ್ಜಲ ಚೇತನ ಯೋಜನೆಯಡಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ, ಗ್ರಾಮೀಣ ಭಾಗದ ಜನತೆ ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮುಂದಿನ ಯುವಪೀಳಿಗೆಗೆ ಸ್ವಾಭಾವಿಕ ಸಂಪನ್ಮೂಲ ಸಂರಕ್ಷಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕಾಮಗಾರಿಗಳಡಿ ಕೆರೆಕಟ್ಟೆ ಅಭಿವೃದ್ಧಿ, ಕೃಷಿಹೊಂಡ, ಬದು ನಿರ್ಮಾಣ, ಮಳೆ ನೀರು ಕೊಯ್ಲು, ರಸ್ತೆ ಬದಿ ಗಿಡನೆಡುವುದು, ಬೆಟ್ಟಗುಡ್ಡಗಳ ಇಳಿಜಾರಿಗೆ ಅಡ್ಡವಾಗಿ ಇಂಗು ಕಂದಕಗಳ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಹೆಚ್ಚು ಕೈಗೊಳ್ಳುವ ಮೂಲಕ ಮಳೆ ನೀರು ಸಂರಕ್ಷಿಸಬಹುದು. ಜಲಶಕ್ತಿ ಅಭಿಯಾನದಡಿ ಸಮಗ್ರಕೆರೆ ಅಭಿವೃದ್ಧಿ, ನಾಲಾಬದು, ಕಲ್ಯಾಣಿ, ಚೆಕ್‌ಡ್ಯಾಮ್, ಬೋಲ್ಡರ್‌ಚೆಕ್, ಬಚ್ಚಲುಗುಂಡಿ, ತೆರೆದ ಬಾವಿಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿವೆ.

ಅಂತರ್ಜಲ ಚೇತನ ಯೋಜನೆಯಡಿ ಇಂಜೆಕ್ಷನ್ ವೆಲ್, ಹಳ್ಳ, ಕಾಲುವೆಗೆ ಅಡ್ಡವಾಗಿ ಬೋಲ್ಡರ್ ಚೆಕ್ ಮತ್ತು ರೀಚಾರ್ಜ್‌ವೆಲ್ ಕಾಮಗಾರಿ, ನೀರಿನಕೊಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಜನರು ಸದುಪಯೋಗ ಪಡಿಸಿಕೊಳ್ಳಬೇಕು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸೃಜನೆಯಾಗಿರುವ ವಾನವ ದಿನಗಳಿಗೆ ಸಕಾಲಕ್ಕೆ ಕೂಲಿ ಹಣ ಪಾವತಿಸಲಾಗುತ್ತಿದ್ದು, ಹಣ ಪಾವತಿ ಪ್ರವಾಣ ಶೇ.99.85 ಇವೆ. ಜಿಲ್ಲೆಯ 10 ತಾಲ್ಲೂಕುಗಳ ಪೈಕಿ ತುರುವೇಕೆರೆ ತಾಲೂಕು ಪ್ರಗತಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಗಂಡುಹೆಣ್ಣಿಗೆ ದಿನಕ್ಕೆ 289 ರೂಪಾಯಿಯಂತೆ ಇಬ್ಬರಿಗೂ ಸಮಾನ ಕೂಲಿಯನ್ನು ನೀಡಲಾಗುವುದು. ವೃದ್ಧರು, ಅಂಗವಿಕಲರು, ಮಹಿಳಾ ಪ್ರಧಾನ ಕುಟುಂಬಗಳಿಗೆ ಕೆಲಸದಲ್ಲಿ ಶೇ.50 ವಿನಾಯಿತಿ ನೀಡಲಾಗುವುದು. ಉದ್ಯೋಗ ಚೀಟಿ ಹೊಂದಿರುವ ಪ್ರತಿಯೊಂದು ಕುಟುಂಬಕ್ಕೆ ಕನಿಷ್ಟ 100 ದಿನಗಳ ಉದ್ಯೋಗವನ್ನು ಉದ್ಯೋಗ ಖಾತರಿ ಯೋಜನೆಯಡಿ ನೀಡಲಾಗುವುದು. ಸಾರ್ವಜನಿಕರು ತಮ್ಮ ಸ್ವಂತ ಜಮೀನು, ಹೊಲಗದ್ದೆ, ಮನೆ ನಿರ್ವಾಣ ಮೊದಲಾದ ಕೆಲಸಗಳನ್ನು ವಾಡಿಕೊಳ್ಳುವುದಕ್ಕೂ ನರೇಗಾ ಯೋಜನೆಯಡಿ ಹಣಕಾಸಿನ ಸೌಲಭ್ಯ ಪಡೆಯಬಹುದು ಎಂದು ವಿವರಿಸಿದ್ದಾರೆ.

ಕುರಿ, ದನ, ಹಂದಿ, ಮೇಕೆ ಶೆಡ್‌ಗಳ ನಿರ್ಮಾಣ : ವೈಯಕ್ತಿಕ ಕಾಮಗಾರಿಗಳಾದ ಕುರಿ, ದನ, ಹಂದಿ, ಮೇಕೆ ಶೆಡ್‌ಗಳ ನಿರ್ಮಾಣ, ಬದು ಹಾಗೂ ಕೃಷಿಹೊಂಡ ನಿರ್ಮಾಣ, ಹಿಪ್ಪುನೇರಳೆ ತೋಟ, ತೋಟಗಾರಿಕೆ ಬೆಳೆಗಳು, ಎರೆಹುಳು ಗೊಬ್ಬರ ನಿರ್ಮಾಣ ತೊಟ್ಟಿ, ಬಚ್ಚಲುಗುಂಡಿ, ತೆರೆದ ಬಾವಿ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ವಾಡಿಕೊಳ್ಳಲು ಅವಕಾಶವಿದೆ. ಇದನ್ನು ಗ್ರಾಮೀಣ ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಜನತೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಹೆಚ್ಚಿನ ಸೌಲಭ್ಯ ಪಡೆಯಲು ಹತ್ತಿರದ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬಹುದು. ಯಾವುದೇ ಸಮಸ್ಯೆ ಹಾಗೂ ದೂರುಗಳಿದ್ದಲ್ಲಿ ಉಚಿತ ಸಹಾಯವಾಣಿ 1800 4258 666ಕ್ಕೆ ಕರೆ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net