

ಮುದ್ದೇಬಿಹಾಳ: ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರನ್ನು ಕಳೆದುಕೊಂಡಿರುವುದು ನಮ್ಮ ಪಕ್ಷಕ್ಕೆ, ದೇಶಕ್ಕೆ ತುಂಬಲಾರದ ನಷ್ಟದಂತಾಗಿದೆ ಎಂದು ಹಿರಿಯ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಶೋಕ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಕೆಪಿಸಿಸಿ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ನಂತರ ಇಲ್ಲಿನ ಸುದ್ದಿಗಾರರೊಂದಿಗೆ ಶುಕ್ರವಾರ ಮೊಬೈಲ್‌ನಲ್ಲಿ ಅವರು ಮಾತನಾಡಿ ಅನಿಸಿಕೆ ಹಂಚಿಕೊಂಡರು.
ಆರ್ಥಿಕ ಉದಾರೀಕರಣದ ಹರಿಕಾರರಾಗಿದ್ದ ಮನಮೋಹನಸಿಂಗ್ ಅವರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಉಚಿತ ಕಡ್ಡಾಯ ಶಿಕ್ಷಣ, ಮಕ್ಕಳ ಹಕ್ಕು ಕಾಯ್ದೆ, ಹೈದ್ರಾಬಾದ್ ಕರ್ನಾಟಕಕ್ಕೆ 371 ಜೆ ಸೇರಿ ಹಲವಾರು ಮಹತ್ವದ ಕಾಯ್ದೆ ಜಾರಿಗೊಳಿಸಿದ್ದರು. ಅವರನ್ನು ನಾನು 8-10 ಬಾರಿ ಭೇಟಿಯಾಗಿ ಚರ್ಚಿಸಿದ್ದೆ. ನಮ್ಮ ಎಲ್ಲ ಸುದೀರ್ಘ ಮಾತುಗಳನ್ನು ಸಾವಧಾನದಿಂದ ಕೇಳಿದ ನಂತರವೇ ಚುಟುಕಾಗಿ, ಪರಿಣಾಮಕಾರಿಯಾಗಿ ಉತ್ತರಿಸುವ ಜಾಣ್ಮೆ ಹೊಂದಿದ್ದರು.
ಅತ್ಯಂತ ಸೌಮ್ಯ ಸ್ವಭಾವದ ಮನಮೋಹನಸಿಂಗ್ ಅವರು ಖಾಸಗೀಕರಣ, ಉದಾರೀಕರಣ, ಜಾಗತೀಕರಣದತ್ತ ಹೆಚ್ಚಿನ ಒಲವು ಹೊಂದಿ ಅನುಷ್ಠಾನಗೊಳಿಸಿದ್ದರು.
ಶಿಕ್ಷಣ, ವಿಜ್ಞಾನದ ಮಹತ್ವವನ್ನು ದೇಶಕ್ಕೆ ತಿಳಿಸಿಕೊಟ್ಟಿದ್ದರು. ಗ್ಲೋಬಲ್ ಎಕಾನಮಿ ಜೊತೆ ಭಾರತವನ್ನು ಜೋಡಿಸಿ ಆರ್ಥಿಕ ಸಂಕಷ್ಟದಿಂದ ಹೊರತಂದ ಚಾಣಾಕ್ಷರಾಗಿದ್ದರು.
ಸದ್ಯ ಭಾರತ ಆರ್ಥಿಕತೆಯಲ್ಲಿ ಸಾಕಷ್ಟು ಮುಂದುವರಿದ ದೇಶ ಎನಿಸಿಕೊಳ್ಳಲು ಅವರು ಕೊಟ್ಟ ಕೊಡುಗೆಯೇ ಕಾರಣ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಅವರ ಅಗಲಿಕೆ ನಮ್ಮೆಲ್ಲರಿಗೂ ಸಾಕಷ್ಟು ನೋವು ನೀಡಿದಂತಾಗಿದೆ ಎಂದು ತಿಳಿಸಿದರು.