

ನಂಜನಗೂಡು: ಪಟ್ಟಣದ ವಿದ್ಯಾನಗರದಲ್ಲಿರುವ ಶಂಕರ ಸದನದಲ್ಲಿ ಡಿವಿಜಿ ಬಳಗ ಉದ್ಘಾಟನೆ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಸಾಹಿತಿ ಕಳಲೆ ಗುರುಸ್ವಾಮಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಗ್ಗಗಳು ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಕಗ್ಗ ಎಂದು ಏಕೆ ಕರೆದರು? ಕಗ್ಗಂಟು ಎನ್ನುವುದರ ಸಂಕ್ಷಿಪ್ತ ರೂಪವಾಗಿರಬಹುದೇ ಎಂದು ಹಾಸ್ಯ ಚಟಾಕಿ ಹಾರಿಸಿದರು. ಶ್ರೇಷ್ಠ ವಿಚಾರಧಾರೆಗಳನ್ನು ಹೊತ್ತ ಭಗವದ್ಗೀತೆಗೆ ಸಮಾನವಾದ ಶ್ರೇಷ್ಠ ಕೃತಿ ಮಂಕುತಿಮ್ಮನ ಕಗ್ಗ ಎಂದು ಶ್ಲಾಘಿಸಿದರು.
ನಿವೃತ್ತ ಉಪನ್ಯಾಸಕ ಸುಮಾ ನಾಗರಾಜ್ ಮಾತನಾಡಿ, ಡಿವಿಜಿ ಆಧ್ಯಾತ್ಮಿಕ ಗುರು, ಆಧ್ಯಾತ್ಮಿಕ ಸಂತ. ಅವರಿಗಿದ್ದಷ್ಟು ಜ್ಞಾನ ಮತ್ಯಾರಿಗೂ ಇಲ್ಲ ಎಂದು ಶ್ಲಾಘಿಸಿದರು. ಕಗ್ಗಗಳನ್ನು ಹಾಡಿ ಬಣ್ಣಿಸಿದರು. ಅವರ ಗಾಯನದ ಮಾಧುರ್ಯ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.
ಡಿವಿಜಿ ಬಳಗದ ಸಂಸ್ಥಾಪಕ ತಗಡೂರು ಗೋಪಿನಾಥ್ ಮಾತನಾಡಿ, ಚಿಕ್ಕ ವಯಸ್ಸಿನಿಂದಲೂ ನನಗೆ ಕಗ್ಗವೆಂದರೆ ಬಲು ಇಷ್ಟ. ಈಗ ಇದನ್ನು ಎಲ್ಲರಿಗೂ ಪರಿಚಯಿಸುವ ಸದಾವಕಾಶ ಸಿಕ್ಕಿದೆ. ಅನುಭವ ವೇದ್ಯವಾದ ಕಗ್ಗ ನಾಡಿನಿಂದಾಚೆಗೂ ಹರಡಿದೆ. ಜನರ ಜೀವನಮಟ್ಟ ಹಾಗೂ ಅಲೋಚನಾ ಗುಣಮಟ್ಟ ಉತ್ತಮಗೊಳಿಸುವತ್ತ ಕಗ್ಗದ ಕಂಪು ನಿರಂತರವಾಗಿ ಹರಿಯಬೇಕು ಎಂದರು.
ಸಂಪನ್ಮೂಲ ಶಿಕ್ಷಕ ಸಿದ್ದರಾಜಪ್ಪ ಮಾತನಾಡಿ, ಎಲ್ಲರೂ ಸಾತ್ವಿಕತೆಯಿಂದ ಸೇರಿ ಸದ್ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಈ ಸತ್ಸಂಗದ ಶಕ್ತಿಯ ಬಗ್ಗೆ ವಿವರಿಸಿ, ಬರೆದ ಹಾಗೆ ಬದುಕಿದವರು ಡಿವಿಜಿ ಅವರು ಎಂದು ಶ್ಲಾಘಿಸಿದರು. ಅವರ ಪುತ್ರ ಬಿ.ಜಿ.ಎಲ್. ಸ್ವಾಮಿ ಅವರನ್ನು ಸ್ಮರಿಸಿದರು.
ಮುಖ್ಯಶಿಕ್ಷಕ ನಾಗಶಯನ ಮಾತನಾಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಂಜನಗೂಡು ಸತ್ಯನಾರಾಯಣ, ಶೋಭಾ ನಾಗಶಯನ, ಇಂದಿರೇಶ್, ಕಳಲೆ ಗುರುಸ್ವಾಮಿ, ಸಿದ್ದರಾಜಪ್ಪ, ಮಹೇಶ್, ರಂಜನ ಇತರರು ಇದ್ದರು.