

ಮಂಡ್ಯ: ಜನರಿಗೆ ಸಾಂಸ್ಕೃತಿಕ ಪ್ರಜ್ಞೆ ಅತಿ ಅವಶ್ಯ. ಮಾತ್ರವಲ್ಲದೆ ಇದರ ಬಗ್ಗೆ ಮಕ್ಕಳಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಶಾಲೆಗಳಲ್ಲಿ ಹೆಚ್ಚೆಚ್ಚು ಕಾರ್ಯಕ್ರಮ ಏರ್ಪಡಿಸುವಂತೆ ನಿವೃತ್ತ ಉಪನ್ಯಾಸಕ ಜಿ.ಟಿ.ವೀರಪ್ಪ ಸಲಹೆ ನೀಡಿದರು.
ನಗರದ ಜೈ ಕರ್ನಾಟಕ ಪರಿಷತ್ ಕಚೇರಿಯಲ್ಲಿ ಆಯೋಜಿಸಿದ್ದ ಮಂಕುತಿಮ್ಮನ ಕಗ್ಗದ ವಾಚನ, ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಶ್ರೇಷ್ಠತೆಯ ಬಗ್ಗೆ ತಿಳಿಯಲು ಇತಿಹಾಸ, ಕಾವ್ಯ ಚರಿತ್ರಿಕ ವಿಷಯಗಳನ್ನು ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.
ಮುಂದಿನ ಪೀಳಿಗೆ ಕನ್ನಡದ ಬಾಷೆ, ಜಲ ನಾಡು ನುಡಿಯ ಬಗ್ಗೆ ಜಾಗೃತರಾಗಿ ಅಸ್ಮಿತೆಯನ್ನು ಕಾಪಾಡಬೇಕಾದ ಅಗತ್ಯತೆ ಹಾಗೂ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜೈ ಕರ್ನಾಟಕ ಪರಿಷತ್ ಹಮ್ಮಿಕೊಡಿರುವ ಕನ್ನಡಪರ ಹೋರಾಟ, ಜಾಗೃತಿ ಮತ್ತು ತರಬೇತಿ ಕಾರ್ಯಗಾರ ಶಾಘನೀಯ ವಿಚಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ 30 ವರ್ಷದ ನಂತರ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಅದ್ದೂರಿಯಾಗಿ ಹೆಚ್ಚು ಹಣ ವೆಚ್ಚ ಮಾಡಿ ಸಾಹಿತಿಗಳನ್ನೂ ಕಡೆಗಣಿಸಿ ರಾಜಕೀಯ ಪ್ರೇರಿತವಾಗಿ ಮಾಡಿದ ಜಾತ್ರೆಯಾಗಿತ್ತು. ಕಸಾಪ ಅಧ್ಯಕ್ಷರ ವರ್ತನೆ, ಸರ್ವಾಧಿಕಾರಿ ಧೋರಣೆಗಳು ತೀವ್ರ ಖಂಡನೀಯ. ಸಮ್ಮೇಳನಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಜನತೆ ಇಂತಹುದ್ದನ್ನೆಲ್ಲ ಪ್ರತಿಭಟಿಸಬೇಕು. ಅನ್ಯಾಯದ ವಿರುದ್ಧ ನಿಲ್ಲುವ ಮನಸ್ಥಿತಿಯನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಭಾಷೆ, ನಾಡು, ನುಡಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಮಾತನಾಡಿ, ಕಸಾಪಗಾಗಿ ಜಿಲ್ಲೆಯಲ್ಲಿ ಬೀದಿ ಬೀದಿಗಳಲ್ಲಿ ಪುಸ್ತಕಗಳನ್ನು ಮಾರಿದ್ದೇವೆ. ಗುಣಮಟ್ಟದ ಕಾರ್ಯಕ್ರಮಗಳನ್ನು ನಿತ್ಯ ಸಚಿವ ಕೆ.ವಿ.ಶಂಕರಗೌಡರ ಸಹಕಾರ, ಕಾಳಜಿಯ ಪ್ರತೀಕವಾಗಿ ಮಾಡಿದ್ದೇವೆ. ಇದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲ ಕನ್ನಡಿಗರ ಮೇಲಿದೆ ಎಂದರು.
ಜೈ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ ಅಧ್ಯಕ್ಷ ಎಂ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶ್ರೀನಿವಾಸಶೆಟ್ಟಿ, ಶಂಕರೇಗೌಡ ಇತರರಿದ್ದರು. ಇದೇ ವೇಳೆ ಕನ್ನಡದ ಭಗವದ್ಗೀತೆ ಹಾಗೂ ಮಂಕುತಿಮ್ಮನ ಕಗ್ಗದ ಆಯ್ದ ಕಗ್ಗಗಳನ್ನು ಗಮಕಿ ಸಿ.ಪಿ.ವಿದ್ಯಾಶಂಕರ್ ವಾಚಿಸಿದರೆ, ಸಾಹಿತಿ ಎಸ್.ಶ್ರೀನಿವಾಸಶೆಟ್ಟಿ ಪ್ರವಚನ ನಡೆಸಿಕೊಟ್ಟರು.