

ಅಥಣಿ: ಎಪಿಎಂಸಿ ಮತ್ತು ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಾನುವಾರು ಹೊಸ ಮಾರುಕಟ್ಟೆಯಲ್ಲಿ 1,000 ಸಸಿ ನೆಡುವ ವನಮಹೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಡಿಸಿಎಂ ಲಕ್ಷ್ಮಣ ಸವದಿ ಸಸಿನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯಿಂದ ಮನುಕುಲ ಉಳಿಯಲು ಸಾಧ್ಯ. ಅದಕ್ಕಾಗಿ ಹೆಚ್ಚು ಸಸಿ ನೆಟ್ಟು ಬೆಳೆಸಬೇಕು. ಪರಿಸರ ಬೆಳೆದರೆ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಜನರು ಆರೋಗ್ಯವಾಗಿರಲು ಸಾಧ್ಯ ಎಂದರು.
ಎಪಿಎಂಸಿ ಅಧ್ಯಕ್ಷ ಶ್ರೀಶೈಲ ದುಲಾರಿ, ಉಪಾಧ್ಯಕ್ಷ ಶಿವಾನಂದ ಮಗದುಮ್ಮ, ಕಾರ್ಯದರ್ಶಿ ಬಿ.ಎಸ್. ಬಾವಿಹಾಳ, ಸದಸ್ಯ ಮುರುಗೆಪ್ಪ ಮಮದಾಪುರ, ವಲಯ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ, ಗೋಕಾಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ, ಶಿವಾನಂದ ನಾಯ್ಕೋಡಿ, ಶಿವಾನಂದ ದಿವಾನಮಳ ಇತರರು ಇದ್ದರು.
ತಾಲೂಕಾಡಳಿತದ ವಿರುದ್ಧ ಮನವಿ: ತಹಸೀಲ್ದಾರ್ ಕಚೇರಿಯ ಪಹಣಿ ವಿಭಾಗದಲ್ಲಿ ಮತ್ತು ಸರ್ವೇ, ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳನ್ನು ಸರಿಯಾಗಿ ಮಾಡಿಕೊಡುತ್ತಿಲ್ಲ. ಅನವಶ್ಯಕವಾಗಿ ಸಾಮಾನ್ಯ ಜನರಿಗೆ ಅಧಿಕಾರಿಗಳು, ಸಿಬ್ಬಂದಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಹಾಗೂ ಗ್ರಾಮೀಣ ನಿವಾಸಿಗಳು ಮನವಿ ಮಾಡಿದರು. ಈ ಕುರಿತು ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಡಿಸಿಎಂ, ಕೂಡಲೆ ಎಲ್ಲ ಕೆಲಸ ಕಾರ್ಯಗಳು ಸುಗಮವಾಗುವಂತೆ ವ್ಯವಸ್ಥೆ ಮಾಡಲು ಸೂಚಿಸಿದರು.