

ಕಾರವಾರ: ರಾಮ ಪ್ರಪಂಚಕ್ಕೆ ಒಬ್ಬನೇ. ರಾಮ ನಮ್ಮವ ನನಗೂ ರಾಮ ದೇವರ ಬಗ್ಗೆ ಅಪಾರ ಭಕ್ತಿ ಇದೆ. ಬಿಜೆಪಿಯವರು ರಾಜಕೀಯ ಮಾಡಿದರೆ, ರಾಮ ಅವರನ್ನು ನೋಡಿಕೊಳ್ಳುತ್ತಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಬಗ್ಗೆ ಮಾತನಾಡಿದ ಅವರು, ರಾಮನ ಬಗ್ಗೆ ನನಗೆ ಅಪಾರ ಭಕ್ತಿ ಇದೆ. ನಾನೂ ರಾಮ ಮಂದಿರ ನಿರ್ಮಾಣಕ್ಕೆ ಹಣ ಕೊಟ್ಟಿದ್ದೇನೆ.
ರಾಮ ಮಂದಿರ ಉದ್ಘಾಟನೆಗೆ ನಾನೂ ಹೋಗಬೇಕು ಎಂದುಕೊಂಡಿದ್ದೇನೆ. ಉದ್ದೇಶಪೂರ್ವಕವಾಗಿ ಬಿಜೆಪಿಯವರು ಆಹ್ವಾನ ಕೊಟ್ಟಿಲ್ಲ. ರಾಮನ ಬಗ್ಗೆ ಭಕ್ತಿ ಇದೆ ಎಂದರೆ, ಪಕ್ಷಾತೀತವಾಗಿ ರಾಮಮಂದಿರವನ್ನು ತೆರೆಯಬೇಕು. ಸಾರ್ವಜನಿಕರಿಗೆ ಪಕ್ಷಾತೀತವಾಗಿ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಬ್ರಾಹ್ಮಣರು ಪೂಜೆ ಮಾಡಬೇಕು
ರಾಮಲಲ್ಲಾ ಮೂರ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಆರತಿ ಮಾಡಬೇಕು ಎಂಬ ಆಗ್ರಹ ಹಾಗೂ ವಿರೋಧ ಎರಡೂ ಕೇಳಿ ಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ, ಸಚಿವ ಮಂಕಾಳ, ಒಬ್ಬೊಬ್ಬರ ನಂಬಿಕೆ ಒಂದೊಂದು ರೀತಿ ಇರುತ್ತದೆ. ಶಾಸ್ತ್ರಗಳನ್ನು ಬಲ್ಲ ಬ್ರಾಹ್ಮಣರು ಪೂಜೆ ಮಾಡಬೇಕು ಎಂಬುದು ನಮ್ಮ ನಂಬಿಕೆ. ಅದರಿಂದ ನಮಗೆ ಸಮಾಧಾನವಾಗುತ್ತದೆ. ಬೇರೆಯವರ ನಂಬಿಕೆಯನ್ನು ನಾವು ಪ್ರಶ್ನೆ ಮಾಡಲು ಬಾರದು ಎಂದರು.
ಇದನ್ನೂ ಓದಿ: ಮಾಜಾಳಿ ರಾಮನಾಥ ದೇವರಿಗೆ ಬಂತು ಹೊಸ ರಥ