

ಆಲೂರು: ಸರ್ಕಾರಿ ಶಾಲೆಗಳು ಅವಗಣನೆಗೆ ತುತ್ತಾಗಿರುವ ಸಮಯದಲ್ಲಿ ಶಾಲೆಗಳ ಅಭಿವೃದ್ಧಿಗೆ ಸಮಾಜ ಸೇವಕ ಅಂಜಳಿಗೆ ಮಂಜುನಾಥ್ ಮುಂದಾಗಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಹೇಳಿದರು.
ತಾಲೂಕಿನ ಕಣತೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಸ್ಮಾರ್ಟ್ ಕ್ಲಾಸ್‌ಗೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್‌ಗಳು ಮಕ್ಕಳ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಿವೆ. ಇದನ್ನು ಅರಿತ ಅಂಜಳಿಗೆ ಮಂಜುನಾಥ್ ಅವರು ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಒದಗಿಸಿರುವುದು ಶ್ಲಾಘನೀಯ. ನಾನು ಇದೇ ಶಾಲೆಯ ಹಳೆಯ ವಿದ್ಯಾರ್ಥಿ. ಅಂದಿನ ವಿದ್ಯಾಭ್ಯಾಸಕ್ಕೂ ಇಂದಿನ ವಿದ್ಯಾಬ್ಯಾಸಕ್ಕೆ ಬಹಳ ವ್ಯತ್ಯಾಸವಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಸ್ಥಾನದಲ್ಲಿದ್ದಾಗ ಆ ಶಾಲೆಗೆ ಉದಾರ ಮನಸ್ಸಿನ ನೆರವು ನೀಡಬೇಕು. ಹಾಗಾಗಿ, ಕಣತೂರಿನ ಈ ಸರ್ಕಾರಿ ಶಾಲೆಗೆ ಇಂಟರ್‌ಲಾಕ್ ವ್ಯವಸ್ಥೆಯನ್ನು ಅಳವಡಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕಾದ ಅನಿರ್ವಾಯತೆ ಇದೆ. ಶಿಕ್ಷಣದಿಂದ ಮಾತ್ರ ನಮ್ಮ ಭವಿಷ್ಯದ ಬದುಕು ಭದ್ರಪಡಿಸಲು ಸಾಧ್ಯ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಅಭ್ಯಾಸ ಮಾಡುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆ ಸವಾಲಾಗಿ ಪರಿಣಮಿಸಿದ್ದು, ಇಂತಹ ಸವಾಲನ್ನು ಸುಲಭವಾಗಿ ಎದುರಿಸಲು ಸ್ಮಾರ್ಟ್ ಕ್ಲಾಸ್ ಸಹಕಾರಿ ಎಂದು ಅಭಿಪ್ರಾಯಪಟ್ಟರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು ಮಾತನಾಡಿದರು. ಕಣತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಅಂಜಳಿಗೆ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೃಥ್ವಿ ರಾಮ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ವಿರುಪಾಕ್ಷ, ಸದಸ್ಯರಾದ ರಮೇಶ್, ಯತೀಶ್, ವಿರೂಪಾಕ್ಷ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದೇಶ್ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಚಂದ್ರಮ್ಮ, ಶಾಲಾ ಶಿಕ್ಷಕಿಯರಾದ ಪ್ರಮೀಳಾ, ಬಿ.ಎಸ್.ಹಿಮಾ, ಶೋಭಾ, ರೂಪಾ, ರಾಜೇಶ್ವರಿ ಇತರರು ಇದ್ದರು.