ಸಮ ಸಮಾಜದ ಕನಸು ಕಂಡಿದ್ದ ಮಂಜಣ್ಣ

Manjanna
Published on

ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅನಿಸಿಕೆ

'ನೆನಪು ಹದಿಮೂರು' ಸಂಸ್ಕರಣಾ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಜನಸಾಮಾನ್ಯರ ನೋವು-ನಲಿವುಗಳಿಗೆ ಸದಾ ಸ್ಪಂದಿಸುತ್ತ, ರಾಷ್ಟ್ರದ ಕಾಂಗ್ರೆಸ್​ ನಾಯಕ ಒಸ್ಕರ್​ ಫೆರ್ನಾಂಡಿಸ್​ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಮಂಜುನಾಥ ಉದ್ಯಾವರ (ಮಂಜಣ್ಣ), ಸಮ ಸಮಾಜದ ಕನಸು ಕಂಡವರು. ಮರೆವು ಎಲ್ಲರ ಸಹಜ ಗುಣ. ಆದರೆ, ಇಲ್ಲಿನ ಜನ ಮಂಜಣ್ಣನನ್ನು ಇಂದಿಗೂ ಮರೆತಿಲ್ಲ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.

ಉದ್ಯಾವರದ ವಿಠೋಬ ರುಕುಮಾಯಿ ನಾರಾಯಣ ಗುರು ಮಂದಿರದಲ್ಲಿ ಉದ್ಯಾವರ ಫ್ರೆಂಡ್ಸ್​ ಸರ್ಕಲ್​ ಆಶ್ರಯದಲ್ಲಿ ಆಯೋಜಿಸಿದ್ದ ಗ್ರಾಮದ ಅಭಿವೃದ್ಧಿಯ ಹರಿಕಾರ ಮಂಜುನಾಥ ಉದ್ಯಾವರ ಸಂಸ್ಕರಣಾ ಕಾರ್ಯಕ್ರಮ 'ಮಂಜಣ್ಣನ ನೆನಪು ಹದಿಮೂರು' ಹಾಗೂ ವೈದ್ಯಕೀಯ ನೆರವು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಂದಾಪುರ ಬ್ಲಾಕ್​ ಕಾಂಗ್ರೆಸ್​ ಸಮಿತಿಯ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಯಾವುದೇ ಕೆಲಸಕ್ಕಾದರೂ ಮಾರ್ಗದರ್ಶಕರು ಬೇಕು. ಆ ಪಾತ್ರವನ್ನು ಮಂಜಣ್ಣ ನಿರಂತರವಾಗಿ ಮಾಡಿಕೊಂಡು ಬಂದಿದ್ದರು. ಕೈಗೊಂಡ ಕೆಲಸ ಪೂರ್ಣವಾಗುವವರೆಗೆ ಅದರ ಹಿಂದೆಯೇ ಇರುತ್ತಿದ್ದರು. ಇದು ಅವರ ವಿಶೇಷತೆಯಾಗಿತ್ತು ಎಂದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ರಾಜಕೀಯದಲ್ಲಿ ಅವಸರ ಮಾಡಬಾರದು. ತಾಳ್ಮೆಯಿಂದ ಕಾಯಬೇಕು ಎಂದು ಮಂಜಣ್ಣ ಅಂದು ಹೇಳಿದ ಮಾತು ಇಂದು ಅರ್ಥವಾಗುತ್ತಿದೆ. ಅವರು ಸ್ವಾರ್ಥಿಗಳಾಗಿರಲಿಲ್ಲ. ಹೀಗಾಗಿಯೇ ಅವರಿಂದು ಜನರ ಹೃದಯದಲ್ಲಿದ್ದಾರೆ ಎಂದರು.

ಉದ್ಯಾವರದ ಹಿಂದು ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಅಧ್ಯಾಪಕ ಗಣಪತಿ ಕಾರಂತ ಅವರು ಮಂಜಣ್ಣನೊಂದಿಗೆ ಕಳೆದ ಬಾಲ್ಯದ ಒಡನಾಟ ಸ್ಮರಿಸಿದರು. ಮಂಜಣ್ಣ ಸ್ಮರಣಾರ್ಥ ಲಕ್ಷ ರೂಪಾಯಿಗೂ ಅಧಿಕ ಮೊತ್ತದ ವೈದ್ಯಕೀಯ ನೆರವು ವಿತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಗಿರೀಶ ಗುಡ್ಡೆಯಂಗಡಿ ಸ್ವಾಗತಿಸಿದರು. ಕಾರ್ಯದರ್ಶಿ ಆಶಾ ವಾಸು ಫಲಾನುಭವಿಗಳ ಹೆಸರು ವಾಚಿಸಿದರು. ಪ್ರಧಾನ ಕಾರ್ಯದರ್ಶಿ, ಸುಹೇಲ್​ ರಹಮತುಲ್ಲಾ ವಂದಿಸಿದರು. ಮಾಜಿ ಅಧ್ಯಕ್ಷ ಅನೂಕುಮಾರ್​ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಪ್ರಜ್ಞಾನಂ ಟ್ರಸ್ಟ್​ (ರಿ.) ಉಡುಪಿ ವತಿಯಿಂದ ಏಕವ್ಯಕ್ತಿ ರಂಗ ಪ್ರಯೋಗ ನಡೆಯಿತು. ಗಣೇಶ ರಾವ್​ ಎಲ್ಲೂರು ನಿರ್ದೇಶನ, ಸುಧಾ ಆಡುಕಳ ರಚನೆಯ ನಾಟ್ಯರಾಣಿ ಶಾಂತಲಾ ಆತ್ಮವೃತ್ತ ಹೆಜ್ಜೆಗೊಲಿದ ಬೆಳಕು ಶೀರ್ಷಿಕೆಯಲ್ಲಿ ವಿದುಷಿ ಸಂಸ್ಕೃತಿ ಪ್ರಭಾಕರ ಅವರ ಅಭಿನಯ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net