

ಮದ್ದೂರು: ತಾಲೂಕಿನ ಕೊಪ್ಪ ಹೋಬಳಿಯ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಂ.ಬಿ.ಮಂಜುನಾಥ್ (ಮೂಡ್ಯ ಮಂಜು) ಅವಿರೋಧವಾಗಿ ಆಯ್ಕೆಯಾದರು.
ಎಲ್.ಸುನೀಲ್‌ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮಂಜುನಾಥ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ಲೋಕೋಪಯೋಗಿ ಇಲಾಖೆ ಎಇಇ ದೇವಾನಂದ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಎಂ.ಬಿ.ಮಂಜುನಾಥ್ ಮಾತನಾಡಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಆಶೀರ್ವಾದಿಂದ ನಾನು ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಗೆ ಹಚ್ಚಿನ ಒತ್ತು ನೀಡಿ, ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿ ಸಚಿವ ಎನ್.ಚಲುವರಾಯಸ್ವಮಿ ಅವರ ಬಳಿ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡುತ್ತೇನೆ ಎಂದರು.
ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ರೈತರ ಮತ್ತು ಗ್ರಾಮಸ್ಥರ ಕೆಲಸಗಳು ಪಂಚಾಯಿತಿಯಲ್ಲಿ ತ್ವರಿತಗತಿಯಲ್ಲಿ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.
ಮಂಜುನಾಥ್ ಅವರು ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಪಂಚಾಯಿತಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು ಹಾಗೂ ಭಾರಿ ಗಾತ್ರದ ಹಾರ ಹಾಕಿ ಮಂಜುನಾಥ್ ಅವರಿಗೆ ಶುಭಾಶಯ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ವರಲಕ್ಷ್ಮೀ, ಸದಸ್ಯರಾದ ವಿಜಯ ಎಸ್.ಗೌಡ, ಸಿದ್ದೇಗೌಡ್ರು, ಪುಟ್ಟಸ್ವಾಮಿ, ರಾಧಾ ಗೋವಿಂದು, ಮಂಜುಳಾ, ಸುನಂದಮ್ಮ, ರೂಪಾ ರಾಮಕೃಷ್ಣ, ಸುನೀಲ್‌ಕುಮಾರ್, ಮುಖಂಡರಾದ ಆನಂದು, ಟಿ.ಸಿ.ಗೋವಿಂದು, ತಮ್ಮಯ್ಯ, ಶಿವರಾಮಣ್ಣ, ಸತೀಶ್, ತಗ್ಗಹಳ್ಳಿ ಚಂದ್ರು, ಕೆ.ಎನ್.ದಿವಾಕರ್, ತೋಯಾಜಾಕ್ಷ, ದೊರೆಸ್ವಾಮಿ, ಶಿವರಾಮಯ್ಯ ಸೇರಿದಂತೆ ಇತರರು ಹಾಜರಿದ್ದರು.