

ತಿ.ನರಸೀಪುರ: ತಾಲೂಕಿನ ಕರೋಹಟ್ಟಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಮಂಜುಳಾ ರೇವಣ್ಣ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.
ಆಂತರಿಕ ಒಪ್ಪಂದದಂತೆ ಹಿಂದಿನ ಅಧ್ಯಕ್ಷೆ ಎಸ್.ಎಲ್.ಜಯಶ್ರೀ ಅವರು ರಾಜೀನಾಮೆ ನೀಡಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆಗೆ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಪ.ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ರೇವಣ್ಣ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿಯ 19 ಸದಸ್ಯರಲ್ಲಿ 13 ಸದಸ್ಯರು ಭಾಗವಹಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದರು. ಚುನಾವಣಾಧಿಕಾರಿಯಾಗಿ ಎಇಇ ಎಸ್.ಮಂಜುನಾಥ್ ಕಾರ್ಯನಿರ್ವಹಿಸಿದರು. ಫಲಿತಾಂಶದ ಬಳಿಕ ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ಮಾಡಲಾಯಿತು. ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಸೇರಿದಂತೆ ಹಲವರು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು.
ಉಪಾಧ್ಯಕ್ಷ ನಾಗರಾಜು, ಅಭಿವೃದ್ಧಿ ಅಧಿಕಾರಿ ಸೋಲೊಮನ್ ರಾಜ್, ಸದಸ್ಯರಾದ ಕೆ.ಬಿ.ಜಗದೀಶ್, ಪುಟ್ಟಸ್ವಾಮಿ, ನಂದಿನಿ, ರೇವಣ್ಣ, ಮಮತಾ, ಪ್ರಭು, ಪುಟ್ಟಬಸಮ್ಮ, ಸುಶೀಲಮ್ಮ, ಸುರೇಶ, ಮಂಜು, ಗುತ್ತಿಗೆದಾರ ಕೇತಹಳ್ಳಿ ರಾಜಣ್ಣ, ಮಾಜಿ ಅಧ್ಯಕ್ಷ ಬಿ.ಎಂ.ಶಿವಕುಮಾರ್, ಮುಖಂಡ ಕೆ.ಎನ್.ಪ್ರಭುಸ್ವಾಮಿ ಹಾಗೂ ಇನ್ನಿತರರು ಹಾಜರಿದ್ದರು.