ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಕರದಂಟು ನಾಟಿನ ಮಂಜುಳಾ ಸಾಧನೆ

IMG-20230804-WA0026.jpg
Published on

ಬೆಳಗಾವಿ : ಜರ್ಮನಿಯಲ್ಲಿ ನಡೆದಿರುವ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಕರದಂಟು ನಾಡಿನ ಕುವರಿ ಮೂರು ಪದಕ ಗೆಲ್ಲುವ ಮೂಲಕ ಸಾಧನೆ ಮೆರೆದಿದ್ದಾಳೆ. ಬಡ್ಡಿಗೆ ಸಾಲ ಪಡೆದು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಕುಬ್ಜ ಯುವತಿ ಮಂಜುಳಾ ಶಿವಾನಂದ ಗೊರಗುದ್ದಿಯೇ ಇದೀಗ ಮೂರು ವಿವಿಧ ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಸಾಧನೆ ಮಾಡಿದ್ದಾರೆ.

ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿರುವ ಅವರು, ಚಕ್ರ ಎಸೆತದಲ್ಲಿ ಎರಡನೇ ಸ್ಥಾನದಿಂದ ಬೆಳ್ಳಿ ಪದಕ ಹಾಗೂ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗೆದ್ದು ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಆತ್ಮವಿಶ್ವಾಸ ಹಾಗೂ ಪ್ರಯತ್ನವೊಂದಿದ್ದರೇ ಎಂತಹದ್ದೇ ಸವಾಲು ಎದುರಿಸಿ ಯಶಸ್ಸು ಪಡೆಯಬಹುದು ಎನ್ನುವುದಕ್ಕೆ ಜುಲೈ 28ರಿಂದ ಆಗಸ್ಟ್ 4ರವರೆಗೆ ಆಯೋಜಿಸಿದ್ದ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು, ಸುಮಾರು 2.5 ಲಕ್ಷ ರೂ.ಹಣ ಸಾಲ ಮಾಡಿ, ಸ್ಪರ್ಧಿಸಿದ್ದರು.  ಇದೀಗ ಕೇವಲ ಸ್ಪರ್ಧಿಸುವುದಷ್ಟೇ ಅಲ್ಲ, ಪ್ರಮುಖ ವಿಭಾಗಗಳಲ್ಲಿ ಮೂರು ಪದಕ ಸಾಧನೆ ಮಾಡಿ, ಬೆಳಗಾವಿಯ ಕೀರ್ತಿ ಹೆಚ್ಚಿಸಿದ್ದಾರೆ.  
ಈ ಬಗ್ಗೆ ಜರ್ಮನಿಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮಂಜುಳಾ, ಮೂರು ಪದಕ ಗೆದ್ದಿದ್ದರಿಂದ ತುಂಬಾ ಖುಷಿಯಾಗುತ್ತಿದೆ. ಈ ಪದಕಗಳನ್ನು ಭಾರತ ದೇಶಕ್ಕೆ ಮತ್ತು ನನ್ನ ತಾಯಿಗೆ ಅರ್ಪಿಸುತ್ತೇನೆ. ಮುಂದೆ ಇನ್ನು ಹೆಚ್ಚಿನ ಸಾಧನೆ ಮಾಡುವ ಹುಮ್ಮಸ್ಸು ತಮಗೆ  ಬಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net