ಭಾಷಾ ಅಲ್ಪಸಂಖ್ಯಾತ ತಾಲೂಕಾಗಿ ಮಂಜೇಶ್ವರ

web new
Published on

ಉಪ್ಪಳ: ಕೇರಳ ರಾಜ್ಯಸರ್ಕಾರ ಮಂಜೇಶ್ವರ ತಾಲೂಕನ್ನು ಭಾಷಾ ಅಲ್ಪಸಂಖ್ಯಾತ ತಾಲೂಕಾಗಿ ಪರಿಗಣಿಸಿ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.

ಭಾಷಾವಾರು ರಾಜ್ಯ ವಿಂಗಡಣೆಯ ಬಳಿಕ ಕೇರಳದ ಪಾಲಾಗಿದ್ದ ಗಡಿನಾಡ ಕನ್ನಡಿಗರು ಶಿಕ್ಷಣ ಮತ್ತು ಉದ್ಯೋಗ ವಿಚಾರದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದರು. ಹೀಗಾಗಿ ಹೋರಾಟಕ್ಕಿಳಿದ ಕನ್ನಡಿಗರ ಹಲವು ಬೇಡಿಕೆಗೆ ಸರ್ಕಾರ ಮಣಿದಿದೆ.

ಕಾಸರಗೋಡು ತಾಲೂಕಿನ ಭಾಗವಾಗಿದ್ದ ಮಂಜೇಶ್ವರವನ್ನು 2013ರಲ್ಲಿ ವಿಭಜಿಸಿ ಮಂಜೇಶ್ವರ ತಾಲೂಕಿಗೆ ರೂಪು ನೀಡಲಾಗಿತ್ತು. ವರ್ಕಾಡಿ, ಮೀಂಜ, ಮಂಜೇಶ್ವರ, ಪೈವಳಿಕೆ, ಮಂಗಲ್ಪಾಡಿ, ಎಣ್ಮಕಜೆ, ಕುಂಬಳೆ, ಪುತ್ತಿಗೆ ಗ್ರಾ.ಪಂ.ಗಳು ಮಂಜೇಶ್ವರ ವ್ಯಾಪ್ತಿಗೆ ಸೇರಿವೆ. ಬಹುಸಂಖ್ಯಾತ ಕನ್ನಡಿಗರಿರುವ ಗಡಿ ಈ ಗ್ರಾಮಗಳು ಅತ್ಯಂತ ಹಿಂದುಳಿವೆ.

ಕನ್ನಡಿಗರಿಗೆ ವಿಶೇಷ ಆದ್ಯತೆಗಳನ್ನು ನೀಡಿ ಅಲ್ಪಸಂಖ್ಯಾತ ತಾಲೂಕು ಆಗಿ ಘೋಷಿಸಬೇಕೆಂದು 2015ರಲ್ಲಿ ಕರ್ನಾಟಕ ಸಮಿತಿಯ ಮುಖಂಡ ವಕೀಲ ಮುರಳೀಧರ ಬಳ್ಳುಕ್ಕುರಾಯರು ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆ ಬಳಿಕ ಕಸಾಪ ಗಡಿನಾಡ ಘಟಕ ಮನವಿ ಸಲ್ಲಿಸಿತ್ತು. 2018ರಲ್ಲಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಸಲ್ಲಿಸಿ ಸರ್ಕಾರಕ್ಕೆ ನಿರಂತರ ಒತ್ತಡ ಹಾಕಿತ್ತು.

ಲಾಭವೇನು?: ಸರ್ಕಾರಿ ಕಾರ್ಯಾಲಯಗಳ ಉದ್ಯೋಗದಲ್ಲಿ ಮೊದಲ ಆದ್ಯತೆ ಕನ್ನಡಿಗರಿಗೆ ಲಭ್ಯವಾಗಲಿದೆ. ವಿವಿಧ ಕಾರ್ಯಾಲಯಗಳಲ್ಲಿ ಕೆಳದರ್ಜೆಯ ನೌಕರ (ಎಲ್‌ಡಿ ಕ್ಲರ್ಕ್) ಹುದ್ದೆಗೆ ಕನ್ನಡಿಗರನ್ನು ನೇಮಿಸಬೇಕು. ಸರ್ಕಾರದ ಆದೇಶಗಳನ್ನು ಕನ್ನಡದಲ್ಲಿಯೂ ಪ್ರಕಟಿಸಬೇಕಾಗುತ್ತದೆ. ಜನಸಾಮಾನ್ಯರು ಕನ್ನಡದಲ್ಲೇ ವ್ಯವಹರಿಸಬಹುದಾಗಿದ್ದು, ಸರ್ಕಾರವೂ ಕನ್ನಡದಲ್ಲೇ ಉತ್ತರಿಸಬೇಕು. ವಿವಿಧ ನಾಮಫಲಕಗಳನ್ನು ಕನ್ನಡದಲ್ಲೂ ಪ್ರಕಟಿಸಬೇಕಾಗುತ್ತದೆ. ಕನ್ನಡಿಗರ ಮೊಗದಲ್ಲಿ ಮಂದಹಾಸ: ಮಂಜೇಶ್ವರ ತಾಲೂಕು ಸಹಿತ ಜಿಲ್ಲೆಯ ಹಲವು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸರ್ಕಾರ ಕನ್ನಡ ಬಾರದ ಮಲೆಯಾಳಿ ಶಿಕ್ಷಕರನ್ನು ನೇಮಿಸಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಸರ್ಕಾರದ ನೂತನ ಮಾನ್ಯತಾ ಆದೇಶದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪಾಲಿಗೆ ಭರವಸೆಯ ಬೆಳಕು ಮೂಡಿದೆ.

ತಾಲೂಕಿನ ಬಹುಸಂಖ್ಯಾತ ಕನ್ನಡಿಗರಿಗೆ ಲಭ್ಯವಾದ ಆದೇಶ ತೃಪ್ತಿ ತಂದಿದೆ. ಅಹರ್ನಿಶಿ ಪ್ರಯತ್ನಗಳಿಗೆ ಸರ್ಕಾರ ಮಾನ್ಯತೆ ನೀಡಿರುವುದಕ್ಕೆ ಅಭಿನಂದನೆ. ತಾಲೂಕು ವ್ಯಾಪ್ತಿಯ ಕನ್ನಡಿಗರು ಸರ್ಕಾರ ಒದಗಿಸಿರುವ ಅವಕಾಶವನ್ನು ಸಮರ್ಪಕವಾಗಿ, ಸಮರ್ಥವಾಗಿ ಬಳಸಿ ಕನ್ನಡ ಭಾಷೆ, ಸಂಸ್ಕೃತಿ ಸಂವರ್ಧನೆಗೆ ಪ್ರೋತ್ಸಾಹ ನಿಡಬೇಕು. ಮುರಳೀಧರ ಬಳ್ಳುಕ್ಕುರಾಯ, ಹೋರಾಟ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net