

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಮಂಜೇಶ್ವರ ರೈಲ್ವೆ ನಿಲ್ದಾಣದ ಮೂಲಸೌಕರ್ಯಗಳ ಅಭಿವೃದ್ಧಿ ಅಂತಿಮ ಹಂತಕ್ಕೆ ತಲುಪಿದ್ದರೂ ಪ್ರಧಾನ ಕಟ್ಟಡದ ಅವಸ್ಥೆ ಶೋಚನೀಯವಾಗಿ ಮುಂದುವರಿಯುತ್ತಿದೆ. ನಿಲ್ದಾಣದ ಕಚೇರಿ ಕಾರ್ಯಾಚರಿಸುತ್ತಿರುವ ಕಟ್ಟಡ ದುರಸ್ತಿ ಆರಂಭಗೊಳ್ಳಲು ಮೇಲಧಿಕಾರಿಗಳ ಹಸಿರು ನಿಶಾನೆಗಾಗಿ ಕಾಯುತ್ತಿದೆ.
ಕಟ್ಟಡ ನಿರ್ಮಾಣ ಪೂರ್ಣಗೊಂಡು ತಿಂಗಳುಗಳೇ ಕಳೆದರೂ ರೈಲ್ವೆ ನಿಲ್ದಾಣ ಅಭಿವೃದ್ಧಿ ಭಾಗವಾಗಿ ಟಿಕೆಟ್ ಕೌಂಟರ್, ಇತರ ಕಚೇರಿಗಳಿಗಾಗಿ ನಿರ್ಮಿಸಲಾದ ಕಟ್ಟಡವನ್ನು ಇಷ್ಟರ ತನಕ ತೆರೆದು ಕೊಟ್ಟಿಲ್ಲ. ನವೀಕರಣ ಭಾಗವಾಗಿ ಟಿಕೆಟ್ ಕೌಂಟರನ್ನು ಪ್ರಸ್ತುತ ಕಟ್ಟಡದ ಹಿಂಭಾಗಕ್ಕೆ ಬದಲಿಸಿ ಸಮಯಗಳೇ ಕಳೆದಿವೆ. ಇದು ಕೂಡ ಪ್ರಯಾಣಿಕರಿಗೆ ಭಾರಿ ಸಮಸ್ಯೆ ಉಂಟು ಮಾಡಿದೆ. ಸ್ಟೇಷನ್ನಲ್ಲಿ ಹೊಸ ಸಿಗ್ನಲ್ ಕಟ್ಟಡ ನಿರ್ಮಿಸಿದರೆ ಮಾತ್ರ ಹಳೆಯ ಕಟ್ಟಡವನ್ನು ತಪ್ಪಿಸಬಹುದಾಗಿದೆ. ಮತ್ತೊಂದೆಡೆ ಇಂಟರ್ಲಾಕ್, ವಿದ್ಯುದೀಕರಣದ ಕೆಲಸ ನಡೆಯುತ್ತಿದೆ. ಇವೆಲ್ಲ ಪೂರ್ಣಗೊಂಡ ಬಳಿಕವಷ್ಟೇ ನಿಲ್ದಾಣದ ಸಮಸ್ಯೆಗೊಂದು ಅಂತ್ಯ ಕಾಣಬಹುದು. ಈ ಸೋರುತ್ತಿರುವ ಕಟ್ಟಡದಲ್ಲಿ ಇನ್ನೆಷ್ಟು ಕಾಲ ಮುಂದುವರಿಯಬೇಕೆಂಬುದು ಊರವರ, ಪ್ರಯಾಣಿಕರ ಪ್ರಶ್ನೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸುವಂತೆ ಸ್ಥಳೀಯರು, ಪ್ರಯಾಣಿಕರು ಆಗ್ರಹಿಸಿದ್ದಾರೆ.
ಸ್ಟೇಷನ್ ಮಾಸ್ಟರ್ ಕಚೇರಿಯಲ್ಲಿ ಕಳವಳ
ಓಬಿರಾಯನ ಕಾಲದಷ್ಟು ಹಳೆಯದಾಗಿರುವ ಕಟ್ಟಡವೊಂದರಲ್ಲಿ ನಿಲ್ದಾಣದ ಕಚೇರಿ ಕಾರ್ಯಾಚರಿಸುತ್ತಿದೆ. ಮಳೆ ಬಿರುಸುಗೊಳ್ಳುತ್ತಿದ್ದಂತೆ ಸೋರುವಿಕೆ ಶುರುವಾಗಿದೆ. ನೀರಿನ ಸೋರಿಕೆ ತಡೆಯಲು ಮೇಲ್ಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆ ಜತೆಗೆ ಶೀಟ್ ಅಳವಡಿಸಲಾಗಿದೆ. ಟಿಕೆಟ್ ಕೌಂಟರ್, ಸ್ಟೇಷನ್ ಮಾಸ್ಟರ್ ಕಚೇರಿಯಲ್ಲಿ ಈ ದುರವಸ್ಥೆ ಕಳವಳ ಮೂಡಿಸಿದೆ.
ದುರವಸ್ಥೆಯಲ್ಲಿರುವ ಮಂಜೇಶ್ವರ ರೈಲ್ವೆ ನಿಲ್ದಾಣ ಕಟ್ಟಡ ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡುತ್ತಿದೆ. ತೀವ್ರ ಮಳೆ ಕಾರಣ ಪ್ರಯಾಣಿಕರಿಗೆ ಟಿಕೆಟ್ ಕೊಳ್ಳಲು, ಇತರ ಅಗತ್ಯಗಳಿಗೆ ಸ್ಟೇಷನ್ ಕಾರ್ಯಾಲಯದೊಳಗೆ ನಿಲ್ಲಲು ಭಯವಾಗುತ್ತಿದೆ. ನಿಲ್ದಾಣದ ಹಿಂಭಾಗಕ್ಕೆ ಟಿಕೆಟ್ ಕೌಂಟರ್, ಕಾರ್ಯಾಲಯ ಸ್ಥಳಾಂತರಿಸಿದ್ದು ಸಮಸ್ಯೆಗೆ ಕಾರಣವಾಗಿದೆ. ನಿತ್ಯ ನೂರಾರು ವಿದ್ಯಾರ್ಥಿಗಳು, ಮಹಿಳೆಯರು ಆಶ್ರಯಿಸಿರುವ ಈ ನಿಲ್ದಾಣಕ್ಕೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಬೇಕಿದೆ. ರಹ್ಮಾನ್ ಉದ್ಯಾವರ, ಮಂಜೇಶ್ವರ ಗ್ರಾಹಕರ ವೇದಿಕೆ ಕಾರ್ಯದರ್ಶಿ https://www.vijayavani.net/deadline-for-vacating-periyashanthi-illegal-petty-shops https://www.vijayavani.net/harihara-pallattadka-gram-sabha