

ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಪ್ರಯಾಣಿಕರಿಗೆ ಸುಧಾರಿತ ಅನುಭವ ಒದಗಿಸುವುದಕ್ಕೆ ಸಜ್ಜಾಗಿದೆ. ಟಿಕೆಟ್ ಕೌಂಟರ್ ಹಾಗೂ ಸ್ಟೇಷನ್ ಮಾಸ್ಟರ್ ಕಚೇರಿಗಾಗಿ ಹೊಸ ಕಟ್ಟಡ ನಿರ್ಮಾಣ ಕೆಲಸ ಪೂರ್ಣಗೊಂಡಿವೆ. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಉದ್ದ ಹೆಚ್ಚಿಸುವ ಹಾಗೂ ಎರಡು ಪ್ಲಾಟ್‌ಫಾರ್ಮ್ ಪುನರ್‌ನವೀಕರಣ ಕಾಮಗಾರಿ ಅಂತಿಮ ಹಂತದಲ್ಲಿವೆ.
ಹಳೇ ಪ್ಲಾಟ್‌ಫಾರ್ಮ್‌ಗಳನ್ನು ಕೆಡವಿ 85 ಸೆಂ.ಮೀ. ಮೇಲಕ್ಕೇರಿಸಲಾಗಿದೆ. 50 ಸೆಂ.ಮೀ. ಉದ್ದದ ಹಳೇ ಪ್ಲಾಟ್‌ಫಾರ್ಮ್ ಅನ್ನು 70 ಸೆಂ.ಮೀ. ವಿಸ್ತಾರ ಮಾಡಲಾಗಿದೆ. ನಿಲ್ದಾಣದ ಇಬ್ಬದಿಯಲ್ಲೂ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ.
ಪ್ರಯಾಣಿಕರ ವಿಶ್ರಾಂತಿ ಕೊಠಡಿ ಸೌಕರ್ಯ ಹೆಚ್ಚಿಸಬೇಕಾಗಿದೆ. ಪ್ರಸಕ್ತ ಸ್ಟೇಷನ್ ಮುಂಭಾಗದಲ್ಲಿ ಮಾತ್ರ ಸೀಟ್ ಅಳವಡಿಸಲಾಗಿದ್ದು, ಇತರ ಭಾಗಗಳಲ್ಲೂ ಅಳವಡಿಸಬೇಕಾಗಿದೆ. ರಿಸರ್ವೇಶನ್ ಸೌಲಭ್ಯ ಹಾಗೂ ವಿಶ್ರಾಂತಿ ಕೋಣೆಗಳು ಇಲ್ಲದಿರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ರೈಲ್ವೇ ನಿಲ್ದಾಣದ ಉತ್ತರ ಭಾಗದಿಂದ ಆಗಮಿಸುವ ಪ್ರಯಾಣಿಕರನ್ನು ತಲುಪುವುದು ಕಷ್ಟಕರ. ಈ ಮೊದಲು ಬಂಗ್ರಮಂಜೇಶ್ವರ ಪ್ರದೇಶದಿಂದ ರೈಲು ನಿಲ್ದಾಣ ತಲುಪಲು ಪ್ರಯಾಣಿಕರು ಅಡ್ಡದಾರಿ ಉಪಯೋಗಿಸುತ್ತಿದ್ದುದು ಹಲವಾರು ಅಪಘಾತಗಳಿಗೆ ಕಾರಣವಾಗಿತ್ತು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಟೂರಿಸಂ ವಿಭಾಗದ ವಿದ್ಯಾರ್ಥಿಗಳು ನಡೆಸಿದ ಸಮೀಕ್ಷೆ ಪ್ರಕಾರ, ಈ ನಿಲ್ದಾಣಕ್ಕೆ ಇನ್ನಷ್ಟು ರೈಲುಗಳು ಸ್ಥಾಪಿಸುವ ಬಗ್ಗೆ ಮಹತ್ವಪೂರ್ಣ ಶಿಫಾರಸು ಪಡೆದಿದೆ. ವಿದ್ಯಾರ್ಥಿಗಳ ಸಮೀಕ್ಷೆ ವರದಿಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಮುಹಮ್ಮದ್ ಅಲಿ ಮತ್ತು ಟ್ರಾವೆಲ್ ಹಾಗೂ ಟೂರಿಸಂ ವಿಭಾಗದ ಮುಖ್ಯಸ್ಥ ಡಾ.ಸಿಂಧು ಜೋಸೆಫ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಅವರಿಗೆ ಸಲ್ಲಿಸಲಾಗಿದೆ.
ಬೇಕಾಗಿದೆ ಹೆಚ್ಚಿನ ರೈಲು ನಿಲುಗಡೆ
ಮಂಜೇಶ್ವರ ರೈಲು ನಿಲ್ದಾಣ ಹಲವಾರು ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳ ಸಮೀಪದಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ದಿನನಿತ್ಯ ರೈಲನ್ನು ಅವಲಂಬಿಸುತ್ತಿದ್ದಾರೆ. ಹೆಚ್ಚಿನ ರೈಲು ನಿಲುಗಡೆ ಲಭ್ಯವಾಗಬೇಕಾಗಿದೆ. ಮಾವೇಲಿ ಎಕ್ಸ್‌ಪ್ರೆಸ್, ಪರಶುರಾಮ್, ಮಂಗಳಾ-ಲಕ್ಷದ್ವೀಪ್, ನೇತ್ರಾವತಿ, ಹಾಗೂ ಮಂಗಳೂರು ಸೆಂಟ್ರಲ್ ಮೇಲ್ ರೈಲುಗಳಿಗೆ ನಿಲುಗಡೆ ನೀಡಬೇಕಾದ ಅವಶ್ಯಕತೆ ಇದೆ.