ಪ್ರವಾಸಿ ತಾಣವಾಗಲಿ ಪಕ್ಷಿ ತಾಣ

manjal padhe new
Published on

ಹರೀಶ್ ಮೋಟುಕಾನ ಮಂಗಳೂರು

ನಗರದ ಹೊರವಲಯದಲ್ಲಿರುವ ಮಂಜಲ್‌ಪಾದೆ ವಲಸೆ ಪಕ್ಷಿಗಳ ತಾಣವಾಗಿ ಗುರುತಿಸಿಕೊಂಡಿದೆ. ನೂರಾರು ಪಕ್ಷಿ ಪ್ರೇಮಿಗಳನ್ನು ಆಕರ್ಷಿಸುವ ಈ ಪ್ರದೇಶದಲ್ಲಿ ಪ್ರಸ್ತುತ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಇಲ್ಲಿ ಹಾದುಹೋಗಿರುವ ರಸ್ತೆಯಲ್ಲಿ ಸಂಚರಿಸುವುದು ಭಯದ ವಾತಾವರಣ ಸೃಷ್ಟಿಸುತ್ತಿದೆ.

ಪ್ರತಿವರ್ಷ ಹೊರದೇಶಗಳಿಂದ ಸಂತಾನೋತ್ಪತ್ತಿಗಾಗಿ ವಿವಿಧ ಜಾತಿಯ ಪಕ್ಷಿಗಳು ಮಂಜಲ್‌ಪಾದೆಗೆ ಬರುತ್ತವೆ. ಇದರ ವೀಕ್ಷಣೆಗೆಂದು ಹಾಗೂ ಛಾಯಾಚಿತ್ರ ತೆಗೆಯಲು ನೂರಾರು ಮಂದಿ ಇಲ್ಲಿಗೆ ಬರುತ್ತಾರೆ. ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿಸುವ ಎಲ್ಲ ಅನುಕೂಲಗಳೂ ಇವೆ. ಇದಕ್ಕೆ ಸರ್ಕಾರ, ಜನಪ್ರತಿನಿಧಿಗಳು ಮನಸ್ಸು ಮಾಡಬೇಕಷ್ಟೇ.

ಪ್ರಕೃತಿ ರಮಣೀಯ ತಣವಾಗಿರುವ ಮಂಜಲ್‌ಪಾದೆ ಪ್ರಸ್ತುತ ಮದ್ಯ, ಗಾಂಜಾ ಸೇವನೆಯ ತಾಣವಾಗಿ ಬದಲಾದಂತಿದೆ. ಬೋಂದೆಲ್‌ನಿಂದ ಮೂಡುಶೆಡ್ಡೆ, ವಾಮಂಜೂರುಗೆ ಹೋಗುವವರು ಹತ್ತಿರದ ರಸ್ತೆಯಾದ ಕಾರಣ ಇಲ್ಲಿಂದಲೇ ಸಂಚರಿಸುತ್ತಾರೆ. ಸುತ್ತಲೂ ಕಾಡಿನಿಂದ ಆವೃತವಾದ ನಿರ್ಜನ ಪ್ರದೇಶವಾಗಿರುವ ಕಾರಣ ಕೆಲವೊಮ್ಮೆ ಗಾಂಜಾ ವ್ಯಸನಿಗಳ ಕಾಟದಿಂದ ಭಯವಾಗುತ್ತಿದೆ ಎಂದು ನಿತ್ಯ ಸಂಚಾರಿಗಳು ಹೇಳುತ್ತಾರೆ.

ಕಾರು, ದ್ವಿಚಕ್ರ ವಾಹನಗಳಲ್ಲಿ ಹೊರಗಡೆಯಿಂದ ಬರುವ ಯುವಕರು, ಕಾಲೇಜು ವಿದ್ಯಾರ್ಥಿಗಳು ಇಲ್ಲಿ ಮದ್ಯ, ಗಾಂಜಾ ಸೇವನೆ ಮಾಡುವುದು ಕಂಡುಬರುತ್ತಿದೆ. ಮಂಜಲ್‌ಪಾದೆಯಲ್ಲಿ ಸಣ್ಣ ತೊರೆ ಹರಿಯುತ್ತಿದ್ದು, ರಾತ್ರಿ ವೇಳೆಯೂ ಯುವಕರು ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಕೆಲವರು ರಸ್ತೆ ಬದಿಗೇ ಬಂದು ಇಲ್ಲಿ ಸಂಚರಿಸುವವರಿಗೆ ಭಯ ಹುಟ್ಟಿಸುತ್ತಾರೆ. ರಜಾದಿನಗಳಲ್ಲಿ ಕೆಲವು ಜೋಡಿಗಳೂ ಇಲ್ಲಿ ಬರುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಯುವತಿಯರನ್ನು ಕರೆ ತರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಎಚ್ಚರಿಕೆ.

ಬಿಯರ್ ಬಾಟಲಿ ರಾಶಿ, ಗಾಂಜಾ ಅಡ್ಡೆ ಮಂಜಲ್‌ಪಾದೆಯಲ್ಲಿ ಎಲ್ಲೆಂದರಲ್ಲಿ ಕುಡಿದು ಬಿಸಾಡಿರುವ ಬಿಯರ್ ಬಾಟಲಿ ರಾಶಿ ಕಂಡು ಬಂದಿದೆ. ಪರಿಸರದಲ್ಲಿಡೀ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದೆ. ಮರವೂರು ಡ್ಯಾಂಗೆ ಹರಿದು ಹೋಗುವ ನೀರನ್ನೂ ಕಲುಷಿತ ಮಾಡುತ್ತಿದ್ದಾರೆ. ಹೊರಗಡೆಯಿಂದ ವಾಹನಗಳಲ್ಲಿ ಕೋಳಿ, ಆಡು ಮೊದಲಾದ ಮಾಂಸದ ತ್ಯಾಜ್ಯಗಳನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ. ಸಂಚರಿಸುವಾಗ ಗಬ್ಬು ವಾಸನೆ ಬರುತ್ತಿದೆ. ಮೂಡುಶೆಡ್ಡೆಯಿಂದ ಮಂಗಳೂರು ನಗರಕ್ಕೆ ನಿತ್ಯ ಸಂಚಾರ ಮಾಡುವವರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಪ್ರದೇಶ ಗಾಂಜಾ ಅಡ್ಡೆಯಾಗಿಯೂ ಬದಲಾಗಿದೆ. ರಾತ್ರಿ ವೇಳೆ ಇಲ್ಲಿ ಸಂಚರಿಸುವುದು ಅಪಾಯ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿರುವ ಈ ಪ್ರದೇಶದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ರಾತ್ರಿ ವೇಳೆ ಯಾವುದೇ ದುರ್ಘಟನೆ ನಡೆದರೆ ಬೆಳಕಿಗೆ ಬರಬೇಕಾದರೆ ಬೆಳಗ್ಗಿನ ತನಕ ಕಾಯಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಂಜಲ್‌ಪಾದೆ ಪರಿಸರದಲ್ಲಿ ಪ್ರತಿದಿನ ಹಗಲು ಮತ್ತು ರಾತ್ರಿ ವೇಳೆ ಪೊಲೀಸ್ ಗಸ್ತು ತಿರುಗಲಾಗುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರೆ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು. ಸ್ಥಳೀಯರಿಂದ ಇದುವರೆಗೆ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ರಾಘವ ಪಡೀಲ್, ಇನ್‌ಸ್ಪೆಕ್ಟರ್ ಕಾವೂರು ಪೊಲೀಸ್ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net