ಮಾವಿನಹಳ್ಳಕ್ಕಿಲ್ಲ ಸೇತುವೆ ಭಾಗ್ಯ

ಮಾವಿನಹಳ್ಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಅಡಕೆ ಮರದ ದಿಮ್ಮಿಗಳಿಂದ ನಿರ್ಮಿಸಿರುವುದು.
ಮಾವಿನಹಳ್ಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಅಡಕೆ ಮರದ ದಿಮ್ಮಿಗಳಿಂದ ನಿರ್ಮಿಸಿರುವುದು.
Published on

ಕುಶಾಲನಗರ: ಕುಶಾಲನಗರದಿಂದ ಹದಿನೈದು ಕಿಲೋ ಮೀಟರ್ ದೂರದಲ್ಲಿರುವ ಮಾವಿನಹಳ್ಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ 2021 ರಲ್ಲಿ ಮಳೆ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ಇದೀಗ ಗ್ರಾಮಸ್ಥರೇ ಅಡಕೆ ಮರದ ದಿಮ್ಮಿಗಳನ್ನು ಬಳಸಿ ಸೇತುವೆ ನಿರ್ಮಿಸಿಕೊಂಡಿದ್ದಾರೆ.

ಸೇತುವೆ ನಿರ್ಮಾಣ ಸಂಬಂಧ ಯಾವ ಸರ್ಕಾರವೂ ಗಮನ ಹರಿಸದ ಕಾರಣ ಗ್ರಾಮಸ್ಥರೇ ತಾತಾಲ್ಕಿಕ ಸೇತುವೆ ನಿರ್ಮಿಸಿಕೊಂಡಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಅಲ್ಲದೆ ಇದು ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಹಾರಂಗಿ ಸಮೀಪದ ಯಡವನಾಡು ಗ್ರಾಮಕ್ಕೆ ಈ ಸೇತುವೆ ಮೂಲಕ ಹೋದರೆ ಕೇವಲ ಅರ್ಧ ಕಿಮೀ ದೂರದಲ್ಲಿ ಈ ಗ್ರಾಮವಿದೆ. ಇಲ್ಲಿ 18ಕ್ಕೂ ಹೆಚ್ಚು ಕುಟುಂಬವಿದ್ದು, ಅಂದಾಜು 200 ಜನ ವಾಸ ಮಾಡುತ್ತಿದ್ದಾರೆ. ಗ್ರಾಮದ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೋಗಲು ನಿತ್ಯ 7 ರಿಂದ 8 ಕಿಮೀ ದೂರ ನಡೆದು ಹೋಗುವ ಪರಿಸ್ಥಿತಿ ಇದ್ದು, ಸುತ್ತಲೂ ಕಾಡು ಇರುವ ಕಾರಣ ಕಾಡು ಪ್ರಾಣಿಗಳ ಆತಂಕವೂ ಇದೆ.

ವಾಸ್ತವವಾಗಿ ಮಾವಿನಹಳ್ಳ ಗ್ರಾಮ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರಲಿದೆ. ಆದರೆ ಜಿಪಿಎಸ್‌ನಲ್ಲಿ ಪರಿಶೀಲಿಸಿದರೆ ಅದು ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮ ಪಂಚಾಯಿತಿಗೆ ಸೇರುತ್ತದೆ ಎಂದು ತೋರಿಸುತ್ತದೆ. ಇದರ ಪರಿಣಾಮ ಮಾವಿನಹಳ್ಳ ಗ್ರಾಮ ಅನಾಥವಾಗಿರುವುದರ ಜತೆಗೆ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ ಎಂಬುದು ಗ್ರಾಮಸ್ಥ ನಾಣಯ್ಯ ಕೊಲಿಬೈಲು ಅವರ ಬೇಸರ.

ಮಾಜಿ ಸಚಿವ ಅಪ್ಪಚ್ಚು ರಂಜನ್ ಸಾಕಷ್ಟು ಬಾರಿ ಇಲ್ಲಿಗೆ ಭೇಟಿ ನೀಡಿದ್ದು, ಸೇತುವೆ ನಿರ್ಮಾಣ ಸಂಬಂಧ ಭರವಸೆ ಕೊಟ್ಟಿದ್ದರು. ಇದೀಗ ಅವರು ಮಾಜಿಯಾಗಿದ್ದು, ಈವರೆಗೂ ಅವರು ನೀಡಿದ್ದ ಭರವಸೆ ಕಾರ್ಯಗತವಾಗಿಲ್ಲ. ಇನ್ನು ಹಾಲಿ ಶಾಸಕ ಡಾ.ಮಂತರ್ ಗೌಡ ಅವರು ಇಲ್ಲಿಗೆ 3 ಬಾರಿ ಭೇಟಿ ನೀಡಿ ಆಶ್ವಾಸನೆ ನೀಡಿ ತೆರಳಿದ್ದು ಬಿಟ್ಟರೆ ಬೇರೆ ಏನೂ ಅಭಿವೃದ್ಧಿ ಆಗಿಲ್ಲ.

2021 ರಲ್ಲಿ ಕೊಡಗು ಜಿಲ್ಲಾ ಪಂಚಾಯಿತಿಯ ಹಲವು ಇಂಜಿನಿಯರ್‌ಗಳು ಬಂದು ಅಳತೆ ಮಾಡಿ ಇಲ್ಲದ ಪೋಸ್ ಕೊಟ್ಟು ಹೋಗಿದ್ದಾರೆ. ಆದರೆ ಈವರೆಗೂ ಅದು ಏನಾಯಿತು ಎಂದು ತಿಳಿದಿಲ್ಲ. ಈ ನಡುವೆ ಕೊಡಗು ಜಿಲ್ಲಾಧಿಕಾರಿಗೂ ಹಲವು ಬಾರಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಗ್ರಾಮಸ್ಥರ ಮೇಲೆ ಕರುಣೆ ಬಂದಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಸೇತುವೆ ನಿರ್ಮಾಣ ಆಗಬೇಕಿರುವುದು ಕೇವಲ 30 ರಿಂದ 40 ಅಡಿ ಉದ್ದ. ನಾಲ್ಕು ಚಕ್ರದ ವಾಹನ ಹೋಗುವಷ್ಟು ಅಗಲ ಇದ್ದರೆ ಸಾಕು ಎನ್ನುತ್ತಾರೆ ಗ್ರಾಮದ ಉದಯ್. 30 ರಿಂದ 40 ಅಡಿ ಉದ್ದದ ಸೇತುವೆ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ 5 ಕಿಮೀ.ಗೂ ಹೆಚ್ಚು ದೂರ ಕ್ರಮಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ಅಂದಾಜಿನ ಪ್ರಕಾರ 25 ರಿಂದ 30 ಲಕ್ಷ ರೂ. ವ್ಯಯಿಸಿದರೆ ಅದ್ಭುತವಾದ ಸೇತುವೆ ನಿರ್ಮಾಣ ಮಾಡಬಹುದು ಎನ್ನುತ್ತಾರೆ ಗ್ರಾಮಸ್ಥರು. ಕೋಟ್ಯಂತರ ರೂ. ಖರ್ಚು ಆಗುವುದಿದ್ದರೆ ಸರ್ಕಾರಕ್ಕೂ ಕಷ್ಟವಾಗಬಹುದು ಎನ್ನಬಹುದು. ಇಷ್ಟು ಸಣ್ಣ ಸೇತುವೆ ನಿರ್ಮಾಣ 3 ವರ್ಷ ಕಳೆದರೂ ಸಾಧ್ಯವಾಗಿಲ್ಲ ಎಂದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಬೇಕಾಗಿದೆ.

ಮಾವಿನಹಳ್ಳ ಗ್ರಾಮದಲ್ಲಿ ಇರುವ ಬಹುತೇಕರು ಕೂಲಿ ಕಾರ್ಮಿಕರು. ಇಲ್ಲಿ ಶ್ರೀಮಂತರು ಮತ್ತು ರಾಜಕೀಯ ಪ್ರಭಾವ ಬಳಸುವ ನಾಯಕರು ಇಲ್ಲದಿರುವುದೇ ಈ ನಿರ್ಲಕ್ಷ್ಯಕ್ಕೆ ಪ್ರಮುಖ ಕಾರಣ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಎಡವಟ್ಟಿನ ಪರಿಣಾಮ 200 ಕ್ಕೂ ಅಧಿಕ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಮನಸ್ಸು ಮಾಡಿದರೆ ಒಂದೆರೆಡು ದಿನಗಳಲ್ಲಿ ಇದಕ್ಕೆ ಬೇಕಾದ ಅನುದಾನ ತರುವುದು ಕಷ್ಟವೇನಲ್ಲ. ಆದರೂ ಅವರು ಯಾಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಗ್ರಾಮಸ್ಥರ ಪ್ರಶ್ನೆ. ಇಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.

ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಇತ್ತ ಗಮಹರಿಸದ ಪರಿಣಾಮ ಗ್ರಾಮಸ್ಥರು ಮನೆಯೊಂದರಿಂದ 300 ರೂ.ನಂತೆ 5,400 ರೂ. ಸಂಗ್ರಹ ಮಾಡಿ ಅಡಕೆ ಮರದ ದಿಮ್ಮಗಳನ್ನು ಖರೀದಿಸಿ ತಾವೇ ಸ್ವತಃ ಕೆಲಸ ಮಾಡಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದ್ದಾರೆ. ಆ ನೂಲಕ ಸರ್ಕಾರಕ್ಕೆ ಒಂದು ರೀತಿಯ ಮುಜುಗರ ಉಂಟು ಮಾಡಿದ್ದಾರೆ. ಮಹಿಳೆಯರು, ವೃದ್ಧರು, ವಿಧ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಇದನ್ನು ಬಳಸಲು ಆರಂಭಿಸಿದ್ದಾರೆ. 5 ಕಿಮೀ ನಡೆಯುತ್ತಿದ್ದ ಜನರು ಈಗ ಕೇವಲ 500 ಮೀಟರ್ ಕ್ರಮಿಸಿದರೆ ಕುಶಾಲನಗರ-ಸೋಮವಾರಪೇಟೆ ಮುಖ್ಯ ರಸ್ತೆ ಸಿಗಲಿದೆ.

ಮೂರು ವರ್ಷಗಳಿಂದ ಸೇತುವೆಗಾಗಿ ಅಲೆಯದ ಕಚೇರಿಗಳಿಲ್ಲ. ಯಾರೂ ನಮ್ಮ ಸಹಾಯಕ್ಕೆ ಬಂದಿಲ್ಲ. ಮಾವಿನಹಳ್ಳ ಗ್ರಾಮದಲ್ಲಿ ಪ್ರಭಾವ ಬೀರುವ ನಾಯಕರು, ಶ್ರೀಮಂತರು ಇಲ್ಲದಿರುವ ಕಾರಣ ನಮ್ಮ ಬೇಡಿಕೆ ಈಡೇರಿಸಲು ಯಾರಿಗೂ ಸಾಧ್ಯವಾಗಿಲ್ಲ. ವಿಜಯವಾಣಿ ವರದಿಯಿಂದಾದರೂ ಸಂಬಂಧಿಸಿದವರಿಗೆ ನಮ್ಮ ಕಷ್ಟ ಅರ್ಥವಾಗಲಿ.
ನಾಣಯ್ಯ ಕೋಲಿಬೈಲು ಮಾವಿನಹಳ್ಳ ನಿವಾಸಿ

ನಾನು ಖುದ್ದು ಮಾವಿನಹಳ್ಳ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಅವರ ಕಷ್ಟ ಏನೆಂದು ನನಗೆ ಅರ್ಥವಾಗಿದೆ. ಸದ್ಯದಲ್ಲೇ ಸೇತುವೆ ನಿರ್ಮಾಣಕ್ಕೆ ಅನುದಾನ ತರುವ ಪ್ರಯತ್ನ ಮಾಡಲಿದ್ದೇನೆ. ಗ್ರಾಮಸ್ಥರಷ್ಟೇ ಆತುರ ನನಗೂ ಇದೆ.
ಡಾ.ಮಂತರ್ ಗೌಡ ಶಾಸಕ, ಮಡಿಕೇರಿ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net