

ಮಣಿಪುರ ಹಿಂಸಾಚಾರ ಮತ್ತು ಜನಾಂಗೀಯ ದಳ್ಳುರಿ ಶಮನಕ್ಕೆ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ರೈತ ಸಂಘದ ಹೋರಾಟಗಾರರು, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೇಷದ ಹಿಂಸಾಚಾರ ಹಾಗೂ ಮಹಿಳೆಯರನ್ನು ಬೆತ್ತಲೆಗೊಳಿಸಿ ಅತ್ಯಾಚಾರ ನಡೆಸಿರುವ ಘಟನೆಗಳು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ಕಳೆದ 83 ದಿನಗಳಿಂದಲೂ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಘಟನೆಗಳನ್ನು ಅವಲೋಕಿಸಿದರೆ ನಮ್ಮ ದೇಶದಲ್ಲಿ ನಾಗರಿಕ ಆಡಳಿತ ಇದೆಯೋ, ಇಲ್ಲವೋ ಎಂಬ ಆತಂಕ ಮತ್ತು ಅನುಮಾನಗಳು ಮೂಡಿವೆ. ಮಣಿಪುರದ ಜನಾಂಗೀಯ ದಳ್ಳುರಿಯನ್ನು ಶಮನ ಮಾಡುವ ಬದಲು ನಮ್ಮ ಒಕ್ಕೂಟ ಸರ್ಕಾರ ಮತ್ತು ಅಲ್ಲಿನ ರಾಜ್ಯ ಸರ್ಕಾರ ಪೋಷಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಬೊಕ್ಕಳ್ಳಿ ನಂಜುಂಡಸ್ವಾಮಿ, ನಾಗನಹಳ್ಳಿ ವಿಜಯೇಂದ್ರ, ನೇತ್ರಾವತಿ, ಹೆಜ್ಜಿಗೆ ಪ್ರಕಾಶ್, ಎನ್. ಪುನೀತ್ ಸೇರಿದಂತೆ ಹಲವರು ಇದ್ದರು.