

ಮುದ್ದೇಬಿಹಾಳ: ಮಣಿಪುರದಲ್ಲಿ ಕುಕಿ ಬುಡಕಟ್ಟು ಜನಾಂಗದ ಮೂವರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಹಾಗೂ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಖಂಡಿಸಿ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಶುಕ್ರವಾರ ಆಗಮಿಸಿದ್ದ ಪ್ರತಿಭಟನಾಕಾರರು, ಮಣಿಪುರ ಘಟನೆಯ ತಪ್ಪಿತಸ್ಥರ ವಿರುದ್ಧದ ಕ್ರಮಕ್ಕೆ ಆಗ್ರಹಿಸಿದರು.
ವಕೀಲರಾದ ಕೆ.ಬಿ. ದೊಡಮನಿ ಮಾತನಾಡಿ, ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿದ್ದರೂ ಕೇಂದ್ರ ಸರ್ಕಾರ ಗಾಢ ಮೌನ ವಹಿಸಿರುವುದೇ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ. ಮೃಗೀಯ ಕೃತ್ಯವೆಸಗಿ ವಿಡಿಯೋ ಮಾಡಿರುವ ಆ ಮನಸ್ಥಿತಿ ದೇಶಕ್ಕೆ ಅಪಾಯಕಾರಿ. ಅಂತಹ ಗೂಂಡಾಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಮಣಿಪುರದಲ್ಲಿ ಸಂಘರ್ಷ ಆರಂಭಗೊಂಡು ಮೂರು ತಿಂಗಳಾಗಿದ್ದರೂ ಆಡಳಿತ ವ್ಯವಸ್ಥೆ ಕ್ರಮಕ್ಕೆ ಮುಂದಾಗದಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ದೇಶದ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಯ ವಾತಾವರಣ ಸೃಷ್ಟಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ರೇಖಾ ಟಿ., ಅವರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘಟನೆ ಅಧ್ಯಕ್ಷ ನೂರೇ ಐನ್‌ಖಾನ್, ಕಾರ್ಯದರ್ಶಿ ಇಫ್ತಿಕಾರ್ ಹಾಸ್ಮಿ, ನಜೀರ ಮಕಾನದಾರ, ಇರ್ಷಾದ ಅಬಾಲೆ, ನೂರೇನಬಿ ನದಾಫ, ಉಮರಫಾರೂಕ್ ಚೌಧರಿ, ಅಬ್ದುಲ್ ಖಾನ್, ಮುನೀರ ಸಾತಿಹಾಳ, ನಿಸಾರ ಮಕಾನದಾರ, ಇಲಿಯಾಸ ಮಾಗಿ, ಅಫ್ತಾಬ್ ಯಕೀನ್, ಇರ್ಫಾನ್ ಕೂಡಗಿ, ಸಂತೋಷ ನಾಯ್ಕೋಡಿ, ಸಿರಾಜ ಮೋಮಿನ, ಫಾರೂಕ್ ದೇಸಾಯಿ ಇತರರಿದ್ದರು.