ಮಣಿಪುರ ಸರ್ಕಾರ ವಜಾಕ್ಕೆ ಒತ್ತಾಯ

1HNL1 MANIPUR
Published on

ಮಣಿಪುರ ಸರ್ಕಾರ ವಜಾಕ್ಕೆ ಒತ್ತಾಯ

ಹಾನಗಲ್ಲ: ಮಣಿಪುರದಲ್ಲಿ ಇತ್ತೀಚೆಗೆ ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ರೋಶನಿ ಸಮಾಜ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜಾ ಮಾತನಾಡಿ, ಮಣಿಪುರದಲ್ಲಿ ಕುಕ್ಕಿ ಮತ್ತು ಮೈತ್ರಿ ಬುಡಕಟ್ಟು ಸಮುದಾಯಗಳ ನಡುವೆ ಸಂವಿಧಾನಿಕ ಹಕ್ಕುಗಳಿಗೋಸ್ಕರ ನಡೆದಿರುವ ಹಿಂಸಾಚಾರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ನಡೆದಿದೆ. ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ, ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿದ ಪುಂಡರನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಮೂರು ತಿಂಗಳಿಂದ ಸಂಘರ್ಷ ನಡೆಯುತ್ತಿದ್ದರೂ ಸಂಘರ್ಷ ಮತ್ತು ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಮಣಿಪುರ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಬೀರೇನ್​ಸಿಂಗ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ ತಕ್ಷಣವೇ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕು. ಸಂತ್ರಸ್ತ ಸಮುದಾಯಗಳಿಗೆ ನೆಲೆ ಕಲ್ಪಿಸಿ ಕೊಡಬೇಕು, ಭಯಪಟ್ಟು ಮಣಿಪುರ ತೊರೆದ ಜನರಿಗೆ ಭದ್ರತೆ ಆಶ್ರಯ ಕಲ್ಪಿಸಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಭೇಟಿ ನೀಡಿ ನೈಜ ಸಂಗತಿ ಪರಿಶೀಲಿಸಿ ಶಾಂತಿಗೆ ಮುಂದಾಗಬೇಕು. ಅಲ್ಲದೆ, ರಕ್ಷಣೆ ನೀಡಲು ವಿಫಲರಾದ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ರೈತ ಮುಖಂಡ ಅಡಿವೆಪ್ಪ ಆಲದಕಟ್ಟಿ, ವಕೀಲರಾದ ವೀಣಾ ಬ್ಯಾತನಾಳ, ಮಧುಲಿಕಾ ದೇಸಾಯಿ ಹಾಗೂ ಸಿಸ್ಟರ್ ವಿ.ಎಸ್. ವೆರೋನಿಕ್ಸ್ ಮಾತನಾಡಿದರು. ವಿವಿಧ ಸಂಘಟನೆಗಳ ಪ್ರಮುಖರಾದ ಮಂಜುನಾಥ ಕುದರಿ, ಬಿ.ಆರ್. ಶೆಟ್ಟರ, ವಿಷ್ಣುಕಾಂತ ಜಾಧವ, ಜರಾಲ್ಡ್ ಡಿಸೋಜಾ, ಮಾಲಿಂಗಪ್ಪ ಅಕ್ಕಿವಳ್ಳಿ, ಪ್ರೇಮಾ ಕಾಳೇರ, ರಾಮಣ್ಣ ಬುಡ್ಡನವರ, ಚಂದ್ರಪ್ಪ ಹೊಸಳ್ಳಿ, ಪರಮೇಶ ಚೌಟಿ, ಕಲಿಮ ಮಾಸನಕಟ್ಟಿ, ಮಹಾಬಲೇಶ್ವರ ಕಮ್ಮಾರ, ಸಂತೋಷ ಡೊಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net