

ಮೈಸೂರು: ನಗರದ ಮಣಿಪಾಲ್ ಆಸ್ಪತ್ರೆ ವತಿಯಿಂದ ‘ಮಣಿಪಾಲ ಸಖಿ ಕನೆಕ್ಟ್’ ವಿಶೇಷ ಕಾರ್ಯಕ್ರಮವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಆಸ್ಪತ್ರೆ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, ಮಣಿಪಾಲ್ ಕಮ್ಯುನಿಟಿ ಕನೆಕ್ಟ್‌ನ ಭಾಗವಾಗಿರುವ ಮಣಿಪಾಲ್ ಸಖಿ ಕನೆಕ್ಟ್, ಮಹಿಳೆಯರು ಪರಸ್ಪರ ಬೆಂಬಲಿಸುವ ಮತ್ತು ಸ್ಫೂರ್ತಿ ತುಂಬುವ ವಾತಾವರಣವನ್ನು ನಿರ್ಮಿಸಲು ಬಯಸುತ್ತದೆ. ಆ ಮೂಲಕ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯಕರ ಭವಿಷ್ಯವನ್ನು ಕಟ್ಟಲು ಅಡಿಪಾಯ ನಿರ್ಮಿಸುತ್ತದೆ ಎಂದು ಹೇಳಿದರು.
ಆಂದೋಲನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ರಶ್ಮಿ ಕೋಟಿ ಮಾತನಾಡಿ, ಮಹಿಳೆಯರು ತಮಗೆ ಬಯಸಿದ್ದನ್ನು ಸಾಧಿಸುವ ಶಕ್ತಿಯನ್ನು ಹೊಂದಿದ್ದಾರೆ. ಮಣಿಪಾಲ್ ಸಖಿ ಕನೆಕ್ಟ್ ಮಹಿಳೆಯರಿಗೆ ಬಲವಾದ ಸಂಪರ್ಕ ಸ್ಥಾಪಿಸಲು ಮತ್ತು ಹೊಸ ಆಯಾಮ ಹುಡುಕಲು ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ಆಹಾರ ತಜ್ಞರು, ಶಿಕ್ಷಕರು, ಕ್ರೀಡಾಪಟುಗಳು, ವ್ಯಾಪಾರ ಮಾಲೀಕರು, ಕ್ಯಾನ್ಸರ್ ವಿರುದ್ಧ ಹೋರಾಡಿ ಬದುಕುಳಿದವರು, ಬರಹಗಾರರು, ಮಾರ್ಗದರ್ಶಕರು, ಸಂಗೀತಗಾರರು, ನೃತ್ಯಗಾರರು ಮತ್ತು ವಕೀಲರಂತಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 24 ಮಹಿಳೆಯರನ್ನು ಸನ್ಮಾನಿಸಲಾಯಿತು.