ಕುಡಿದ ಮತ್ತಿನಲ್ಲಿ ಪಬ್‌ ನೌಕರನ ಕಾಲಿನ ಮೇಲೆ ಕಾರು ಹತ್ತಿಸಿದ ಟೆಕ್ಕಿ

udp-4-car
Published on

ಉಡುಪಿ: ಮಣಿಪಾಲದಲ್ಲಿ ಪಬ್ನಲ್ಲಿ ಪಾರ್ಟಿ ಮಾಡಿ ಹೊರಬಂದ ಯುವಕ ಕುಡಿದ ಮತ್ತಿನಲ್ಲಿ ಯದ್ವಾತದ್ವಾ ಕಾರು ಚಲಾಯಿಸಿ ಪಬ್‌ ನೌಕರನ ಕಾಲಿನ ಮೇಲೆ ಹತ್ತಿಸಿ, ಎರಡು ಐಷಾರಾಮಿ ಕಾರುಗಳನ್ನು ಜಖಂಗೊಳಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಪಬ್ ನೌಕರ ವಿಕ್ರಾಂತ್ ಗಂಭೀರ ಗಾಯಗೊಂಡಿದ್ದಾರೆ. ಜೊತೆಗೆ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ ಐಷರಾಮಿ ಸ್ಕೋಡಾ ಮತ್ತು ಫಾರ್ಚುನರ್ ಕಾರು ಜಖಂಗೊಂಡಿದೆ. ಬೆಂಗಳೂರಿನ ಐಟಿ ಸೆಕ್ಟರ್ ನಲ್ಲಿ ಉದ್ಯೋಗದಲ್ಲಿರುವ ಸುಹಾಸ್ ದಾಂಧಲೆ ನಡೆಸಿದ ಅರೋಪಿ. ಈತ ಸ್ನೇಹಿತರಾದ ಭರತ್, ನವೀನ್ ಕಲ್ಯಾಣ್, ನಿರ್ಮಲ, ಕವನ ಆವರೊಂದಿಗೆ ಉಡುಪಿಯಲ್ಲಿ ಸಂಬಂಧಿಕರ ಮದುವೆಗೆ ಬಂದಿದ್ದು, ಶನಿವಾರ ರಾತ್ರಿ ಬ್ಯಾರೆಲ್ಸ್ ಪಬ್ಗೆ ತೆರಳಿ ಕಂಠಮಟ್ಟ ಕುಡಿದು ದಾಂಧಲೆ ಎಬ್ಬಿಸಿದ್ದಾರೆ. ಮಣಿಪಾಲ ಠಾಣೆಯಲ್ಲಿ ಕಾರು ಚಲಾಯಿಸಿದ ಸುಹಾಸ್ ವಿರುದ್ಧ ಫಾರ್ಚೂನರ್ ಕಾರು ಚಾಲಕ ರೋಶನ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಡ್ರಗ್ಸ್ ಸೇವನೆ ಪರೀಕ್ಷೆ
ಸ್ನೇಹಿತರ ಜೊತೆಗೆ ಪಬ್ ಗೆ ಬಂದು ಹೊರ ಹೋಗುವಾಗ ಈ ಘಟನೆ ನಡೆದಿದ್ದು, ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ ಸುಹಾಸ್ ಮತ್ತು ಸ್ನೇಹಿತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸುಹಾಸ್ ಮದ್ಯ ಸೇವಿಸಿರುವುದು ದೃಢಗೊಂಡಿದೆ. ಇತರೆ ನಿಷೇಧಿತ ಅಮಲು ಪದಾರ್ಥ ಸೇವಿಸಿರುವುದರ ಬಗ್ಗೆ ಪರೀಕ್ಷೆ ನಡೆಸಲಾಗಿದ್ದು ವರದಿ ನಿರೀಕ್ಷಿಸಲಾಗುತ್ತಿದೆ. ಘಟನೆಗೆ ಸಂಭಂದಿಸಿ ಕಪ್ಪು ಬಣ್ಣದ ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net