

ಉಡುಪಿ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಆಶ್ರಯದಲ್ಲಿ ಬಹು ನಿರೀಕ್ಷಿತ ಮಣಿಪಾಲ್ ಮ್ಯಾರಥಾನ್ 6ನೇ ಆವೃತ್ತಿ ಫೆಬ್ರವರಿ 11 ರಂದು ನಡೆಯಲಿದೆ. ಈ ಬಾರಿ ಜೀವನ್ಮರಣ ಕಾಯಿಲೆಯನ್ನು ಅನುಭವಿಸುತ್ತಿರುವ ರೋಗಿಗಳಿಗೆ ಪ್ರಶಾಮಕ ಆರೈಕೆ ಕೇಂದ್ರ 'ಹಾಸ್ಪಿಸ್ ಕೇರ್' ಹಾಗೂ ನಾವು ನಿಮ್ಮ ಜೊತೆ ಸದಾ ಇದ್ದೇವೆ ಎಂಬ ಘೋಷವಾಕ್ಯ ನೀಡಲಾಗಿದೆ ಎಂದು ಮಾಹೆ ಮಣಿಪಾಲ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ಹರೆಯದ ಸುಮಾರು 15,000 ಮಂದಿ ಈ ಮ್ಯಾರಥಾನ್ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಹಿಂದಿನ ಮ್ಯಾರಥಾನ್ನ ಆವೃತ್ತಿಗಳಲ್ಲಿ ಇಥಿಯೋಪಿಯಾ, ಕೀನ್ಯಾ, ಇಂಗ್ಲೆಂಡ್, ನೇಪಾಲ, ಮೆಲೇಶ್ಯಾ, ಅಮೆರಿಕ ಮತ್ತು ಶ್ರೀಲಂಕಾದಿಂದ ಆಸಕ್ತರು ಆಗಮಿಸಿದ್ದರು. ಮುಂಬರುವ 2024 ರ ಮ್ಯಾರಥಾನ್ ಇನ್ನೂ ಹೆಚ್ಚಿನ ಅಂತಾರಾಷ್ಟ್ರೀಯ ಪ್ರತಿಭೆಗಳನ್ನು ಆಕರ್ಷಿಸುವ ಭರವಸೆಯನ್ನು ಹೊಂದಿದೆ. ಅ.15ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು.
ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಮಾತನಾಡಿ, ಮ್ಯಾರಥಾನ್ನಲ್ಲಿ ಪಾಲ್ಗೊಳ್ಳುವವರಿಗೆ ಓಟ ಮಾತ್ರವಲ್ಲದೆ ಮಣಿಪಾಲ -ಉಡುಪಿ ಕರಾವಳಿಯ ಸೌಂದರ್ಯವನ್ನು ಕಾಣುವ ಅವಕಾಶವೂ ಲಭ್ಯವಾಗಲಿದೆ. 42 ಕಿಮೀ ಪೂರ್ಣ ಮ್ಯಾರಥಾನ್, 21.1 ಕಿಮೀ ಅರ್ಧ ಮ್ಯಾರಥಾನ್, 10 ಕಿಮೀ ಹಾಗೂ 5 ಕಿಮೀ ಮ್ಯಾರಥಾನ್ ನಡೆಯಲಿದೆ. ಒಟ್ಟು ಎಲ್ಲಾ ವಿಭಾಗಗಳಲ್ಲಿ ವಿಜೇತರಿಗೆ 15 ಲಕ್ಷ ರೂ. ಮೊತ್ತದ ಬಹುಮಾನಗಳನ್ನು ವಿತರಿಸಲಾಗುವುದು ಎಂದರು.
ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಗೌರವ ಸಲಹೆಗಾರ ಕೆ. ರಘುಪತಿ ಭಟ್, ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ನವೀನ್ ಸಾಲಿನ್ಸ್, ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್ನ ಉಪಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ನ ಅಧ್ಯಕ್ಷ ಕೆಂಪರಾಜ್ ಉಪಸ್ಥಿತರಿದ್ದರು. ಮಾಹೆಯ ಕ್ರೀಡಾಮಂಡಳಿಯ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ಸ್ವಾಗತಿಸಿ, ಮೋನಿಕಾ ಜಾಧವ್ ವಂದಿಸಿದರು.