

ಉಡುಪಿ: ತಾಯಿಯ ಎದೆ ಹಾಲು ಶಿಶುಗಳಿಗೆ ಅಮೃತ ಅಥವಾ ಔಷಧವಿದ್ದಂತೆ. ನವಜಾತ ಶಿಶುಗಳು ಆರಂಭಿಕ ದಿನಗಳಲ್ಲಿ ಎದೆಹಾಲನ್ನು ಪಡೆಯುವುದು ನಿರ್ಣಾಯಕವಾಗಿದೆ. ಏಕೆಂದರೆ ಇದು ಶಿಶುಗಳ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಹೇಳಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ಮಣಿಪಾಲ್ ಫೌಂಡೇಶನ್ನ ಮೊದಲ ಮಾನವ ಎದೆಹಾಲು ನಿಧಿ (ಹ್ಯೂಮನ್ ಬ್ರೆಸ್ಟ್ ಮಿಲ್ಕ್ ಬ್ಯಾಂಕ್) ಮಣಿಪಾಲ ಮಾತೃಅಮೃತ್ ಮಿಲ್ಕ್ ಬ್ಯಾಂಕ್ ಉದ್ಘಾಟಿಸಿ, ಮಾತನಾಡಿದರು.
ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಹ್ಯೂಮನ್ ಮಿಲ್ಕ್ ಬ್ಯಾಂಕ್ ಲಾಭರಹಿತ ಉಪಕ್ರಮವಾಗಿದೆ. ಹೆಚ್ಚಿನ ದಾನಿಗಳು ಮುಂದೆ ಬರುವಂತೆ ಮಾನವ ಹಾಲಿನ ಬ್ಯಾಂಕ್ಗಳ ಬಗ್ಗೆ ಸಮುದಾಯಕ್ಕೆ ಶಿಕ್ಷಣ ನೀಡಬೇಕಾಗಿದೆ. ಆರೋಗ್ಯವಂತ ಹಾಲುಣಿಸುವ ತಾಯಂದಿರು, ಶಿಶುಗಳ ವಾಡಿಕೆಯ ತಪಾಸಣೆಗಾಗಿ ಆಸ್ಪತ್ರೆಯ ಓ ಪಿ ಡಿ ಗೆ ಹಾಜರಾಗುವವರು ಮಾನವ ಹಾಲನ್ನು ದಾನ ಮಾಡಬಹುದು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ್ ಅತಿಥಿಯಾಗಿದ್ದರು. ಕೆ ಎಂ ಸಿ ಡೀನ್ ಡಾ ಪದ್ಮರಾಜ್ ಹೆಗ್ಡೆ, ನವಜಾತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶೀಲಾ ಎಸ್. ಮಥಾಯಿ ಉಪಸ್ಥಿತರಿದ್ದರು. ಡಾ.ಶ್ರುತಿ ಕೆ.ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು.