

ಉಡುಪಿ: ಕರೋನೋತ್ತರ ಜಗತ್ತಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಗಳಾಗುತ್ತಿದ್ದು, ಭಾರತದ ವೈದ್ಯರು, ದಾದಿಯರಿಗೆ ಜರ್ಮನಿಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕುಟುಂಬ ಸಮೇತರಾಗಿ ವಾಸಿಸುವುದಕ್ಕೂ ಅವಕಾಶಗಳನ್ನು ನೀಡಲಾಗುತ್ತಿದೆ ಎಂದು ಬೆಂಗಳೂರಿನ ಜರ್ಮನಿ ರಾಯಭಾರಿ ಕಚೇರಿಯ ಕಾನ್ಸುಲ್ ಜನರಲ್ ಆಕಿಮ್ ಬುರ್ಕಾರ್ಟ್ ಹೇಳಿದರು.
ಬುಧವಾರ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಭ್ರೂಣಶಾಸ್ತ್ರ ಮತ್ತು ಸಂತಾನೋತ್ಪತ್ತಿ ವಿಜ್ಞಾನ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಮಣಿಪಾಲವು ಶಿಕ್ಷಣ, ಆರೋಗ್ಯ ಸೇವೆಯ ಶ್ರೇಷ್ಠತೆ ಮತ್ತು ಹೊಸ ಆವಿಷ್ಕಾರಗಳ ಕೇಂದ್ರವಾಗಿದೆ. ವೈದ್ಯಕೀಯ ಜ್ಞಾನವನ್ನು ಹೆಚ್ಚಿಸುವ ಬದ್ಧತೆಯೊಂದಿಗೆ, ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೈಕೆ ಮತ್ತು ಚಿಕಿತ್ಸೆ ನೀಡುತ್ತಿದೆ. ಈ ಕೇಂದ್ರದ ಉದ್ಘಾಟನೆಯು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳಲ್ಲಿ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಗತಿಯನ್ನು ಸಾಧಿಸಲಿದೆ ಎಂದರು.
ಜರ್ಮನಿ ಮತ್ತು ಭಾರತವು ಕಳೆದ ಏಳು ದಶಕಗಳಲ್ಲಿ ನಿರಂತರವಾಗಿ ಸಂಬಂಧಗಳನ್ನು ಬಲಪಡಿಸಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಂಶೋಧನಾ ಸಹಕಾರವನ್ನು ಉತ್ತೇಜಿಸಲು ಎರಡೂ ದೇಶಗಳು ಈಗ ಒತ್ತು ನೀಡುತ್ತಿವೆ. ಜರ್ಮನ್ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ ವಿಶ್ವವಿದ್ಯಾನಿಲಯಗಳೊಂದಿಗೆ ತೊಡಗಿಸಿಕೊಂಡಿವೆ. ಬೆಂಗಳೂರಿನಲ್ಲಿ ವಿಶ್ವದಾದ್ಯಂತ ಅತಿದೊಡ್ಡ ಸಂಶೋಧನಾ ಅಭಿವೃದ್ಧಿ ಸೌಲಭ್ಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ 135 ಬಿಲಿಯನ್ ಯುರೋ ಮೊತ್ತವನ್ನು ಹೂಡಿಕೆ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಅವರು ಹೇಳಿದರು.
ಮಾಹೆ ಮಣಿಪಾಲದ ಸಹ ಕುಲಪತಿ ಡಾ.ಶರತ್ ಕುಮಾರ್ ರಾವ್ ಮಾತನಾಡಿ, ಬಂಜೆತನಕ್ಕೆ ಚಿಕಿತ್ಸೆ ಮತ್ತು ಬಂಜೆತನ ನಿರ್ಮೂಲನೆ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಸಂಶೋಧನೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೊಸ ಚಿಕಿತ್ಸಾ ವಿಧಾನಗಳನ್ನು ಅನ್ವೇಷಿಸಲು ಮತ್ತು ಅಸ್ತಿತ್ವದಲ್ಲಿರುವ ಉಪಕ್ರಮಗಳನ್ನು ಹೆಚ್ಚಿಸಲು ವೇದಿಕೆ ಒದಗಿಸುತ್ತದೆ ಎಂದರು.
ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಲಿನಿಕಲ್ ಭ್ರೂಣಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಡಾ.ಸತೀಶ್ ಅಡಿಗ ಪ್ರಸ್ತಾವಿಕವಾಗಿ ಮಾತನಾಡಿದರು. ಕೆಎಂಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ ಸ್ವಾಗತಿಸಿ, ಪ್ರಜನನ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಡಾ.ಗುರುಪ್ರಸಾದ್ ಕಲ್ತೂರು ವಂದಿಸಿದರು. ರಿಕಿ ಜೋಶಿ ಕಾರ್ಯಕ್ರಮ ನಿರೂಪಿಸಿದರು.