ಅಂಧತ್ವ ನಿವಾರಣೆ ಆರೋಗ್ಯ ಇಲಾಖೆ ಗುರಿ: ಡಾ. ನಾಗಭೂಷಣ್

udp-26-kmc
Published on

ಉಡುಪಿ: ರಾಜ್ಯದಲ್ಲಿ ಮೊದಲ ಬಾರಿಗೆ ನೇತ್ರಪ್ರಧಾನ ಕಾರ್ಯಕ್ರಮದ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಹಯೋಗದೊಂದಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಈ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ. ಕಾರ್ಯಾಗಾರದ ಮೂಲಕ ಹುಟ್ಟಿದ ಮಗುವಿನಿಂದ ಪ್ರಾರಂಭಿಸಿ ಎಲ್ಲರೂ ಅಂಧತ್ವದಿಂದ ಮುಕ್ತರಾಗಬೇಕು ಎಂಬುದು ಇಲಾಖೆ ಆಶಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ ಹೇಳಿದರು.

ಶುಕ್ರವಾರ ಮಾಹೆ ಮಣಿಪಾಲದ ಇಂಟರಾಕ್ಟ್ ಸಭಾಂಗಣದಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಘಟಕ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕೆ ಎಂ ಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ ಮಾತನಾಡಿ, ಕಂಪ್ಯೂಟರ್ ಮತ್ತು ತಂತ್ರಜ್ಞಾನ ಕಾಲದಲ್ಲಿ ಸಣ್ಣ ಮಕ್ಕಳಿಂದ ಹಿಡದು ಎಲ್ಲರೂ ಮೊಬೈಲ್ ಮತ್ತು ದೂರದರ್ಶನದಿಂದ ಕಣ್ಣಿನ ಸಮಸ್ಯೆಗೆ ಒಳಪಡುತ್ತಿದ್ದಾರೆ. ಆದ್ದರಿಂದ ಸೂಕ್ತ ಸಮಯದಲ್ಲಿ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದರು.
ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ.ಲತಾ ನಾಯಕ್, ತರಬೇತಿ ಕಾರ್ಯಕ್ರಮದಿಂದ ನೇತ್ರಕ್ಕೆ ಸಂಬಂದಿಸಿದ ಎಲ್ಲಾ ಕಾಯಿಲೆಗಳನ್ನು ಹಳ್ಳಿ ಹಳ್ಳಿಗಳಲ್ಲಿ ಪತ್ತೆಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗಲು ಸಹಕಾರಿಯಾಗಲಿದೆ ಎಂದರು.

ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು. ಕಸ್ತೂರ್ಬಾ ಆಸ್ಪತ್ರೆ ಕೆ.ಐ.ಆರ್-ಸಹ ಪ್ರಾಧ್ಯಾಪಕಿ ಡಾ.ನೀತಾ, ಸಹಾಯಕ ಪ್ರಾಧ್ಯಾಪಕಿ ಡಾ.ಸುಶನ ಶೆಟ್ಟಿ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ.ರಶ್ಮಿ ಕೆ. ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಗೋಪಾಡಿ ಸ್ವಾಗತಿಸಿ, ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕಾಮತ್ ವಂದಿಸಿದರು. ಡಾ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಾಗಾರದಲ್ಲಿ ನೇತ್ರ ಮತ್ತು ಸಂಬಂಧಿತ ಕಾಯಿಲೆಗಳ ಶಿಕ್ಷಣ ಹಾಗೂ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಕುರಿತು ಶಿಕ್ಷಣ ನೀಡಲಾಯಿತು. ಉಡುಪಿ ಜೆಲ್ಲೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 250 ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರಯೋಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net