

ಉಡುಪಿ: ವೃತ್ತಿಪರರ ನಡುವೆ ಸೌಹಾರ್ದತೆ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುವಲ್ಲಿ ಕ್ರಿಕೆಟ್ನಂತಹ ಕ್ರೀಡಾಕೂಟಗಳು ಮಹತ್ವವನ್ನು ಪಡೆಯುತ್ತವೆ. ಕ್ರೀಡಾಕೂಟದಿಂದ ಸೌಹಾರ್ದತೆ ವೃದ್ಧಿಯೂ ಆಗುತ್ತದೆ ಎಂದು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಅಸೋಸಿಯೇಷನ್ನ ಅಧ್ಯಕ್ಷ ಗೌತಮ್ ಶೆಟ್ಟಿ ಅಭಿಪ್ರಾಯಪಟ್ಟರು.
ಮಣಿಪಾಲದ ಎಂಡ್ ಪಾಯಿಂಟ್ ಮೈದಾನದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಭಾನುವಾರ ಆಯೋಜಿಸಿದ್ದ ಮೂರು ದಿನಗಳ 3ನೇ ಆವೃತ್ತಿಯ ಕಸ್ತೂರ್ಬಾ ಹಾಸ್ಪಿಟಲ್ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಕೆಎಚ್-ಸಿಸಿಎಲ್ )2024 ಉದ್ಘಾಟಿಸಿ ಮಾತನಾಡಿದರು.
ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಮಾಹೆ ಮಣಿಪಾಲ ಎಂದಿಗೂ ಬೆಂಬಲ ನೀಡುತ್ತದೆ. ಸಂಸ್ಥೆಯೊಳಗೆ ಸಮಗ್ರ ಅಭಿವೃದ್ಧಿ ವಾತಾವರಣ ಬೆಳೆಸುವ ಬದ್ಧತೆಯ ಭಾಗವಾಗಿ ಈ ಕ್ರೀಡಾಕೂಟ ಆಯೋಜಿಸಿದ್ದು ಅರ್ಥಪೂರ್ಣವಾಗಿದೆ ಎಂದರು.
ಮಾಹೆ ಸಹ ಕುಲಪತಿ ಡಾ.ಶರತ್ ಕುಮಾರ್ ರಾವ್, ಕುಲಸಚಿವ ಡಾ ಗಿರಿಧರ್ ಕಿಣಿ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಡೀನ್ ಡಾ. ಜಿ ಅರುಣ್ ಮಯ್ಯ, ಮಾರುಕಟ್ಟೆ ಮುಖ್ಯಸ್ಥ ಸಚಿನ್ ಕಾರಂತ್, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ, ಮೋಹನ್ ಶೆಟ್ಟಿ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮೂರು ದಿನಗಳ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಕಾರ್ಪೊರೆಟ್ ಕಂಪನಿಗಳು, ಬ್ಯಾಂಕ್ಗಳು, ವೈದ್ಯಕಿಯ ಸಂಘಗಳು ಮತ್ತು ಮಾಧ್ಯಮ ಸಂಸ್ಥೆ ಪ್ರತಿನಿಧಿಸುವ 24 ತಂಡಗಳು ಪಾಲ್ಗೊಂಡಿವೆ. ಜ.9ರಂದು ಸಮಾರೋಪ ಸಮಾರಂಭ ನಡೆಯಲಿದೆ.