ಮಣಿಪಾಲ್ ಆಸ್ಪತ್ರೆಯಲ್ಲಿ ಆರ್‌ಒ, ಬೈಬ್ಯಾಗ್ ಸೇವೆ ಆರಂಭ : ವೈದ್ಯ ಡಾ.ವಿಪಿನ್ ಕಾವೇರಪ್ಪ ಮಾಹಿತಿ

10
Published on

ಮೈಸೂರು: ಮೂತ್ರಪಿಂಡ ವೈಫಲ್ಯದ ಸಂದರ್ಭಗಳಲ್ಲಿ ಮಾಡುವ ಡಯಾಲಿಸಿಸ್ ವೇಳೆ ಬಳಸುವ ನೀರಿನಿಂದ ಸೋಂಕು, ಅಗತ್ಯ ರಾಸಾಯನಿಕ ಮಿಶ್ರಣವನ್ನು ವ್ಯಕ್ತಿಗಳೆ ಮಾಡುವುದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ನಿವಾರಿಸುವ ನಿಟ್ಟಿನಲ್ಲಿ ನಗರದಲ್ಲಿ ಇದೇ ಮೊದಲ ಬಾರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಡಬಲ್ ಸ್ಟೇಜ್ ರಿವರ್ಸ್ ಆಸ್ಪೋಸಿಸ್ (ಆರ್‌ಒ) ಹಾಗೂ ಬೈಬ್ಯಾಗ್ ಎಂಬ ಅತ್ಯಾಧುನಿಕ ಸೇವೆ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ಮೂತ್ರರೋಗಶಾಸ್ತ್ರ ತಜ್ಞ ವೈದ್ಯ ಡಾ.ವಿಪಿನ್ ಕಾವೇರಪ್ಪ ತಿಳಿಸಿದರು.

ಆರ್‌ಒ ವಿಧಾನ ಬಳಕೆ ಅತ್ಯಾಧುನಿಕವಾಗಿದೆ. ಡಯಾಲಿಸಿಸ್‌ಗೆ ಬಳಸುವ ನೀರಿನಲ್ಲಿ ರೋಗಾಣುಗಳು, ವಿಷಪೂರಿತ ರಾಸಾಯನಿಕ ಅಥವಾ ಲೋಹಗಳಂತಹ ಕಲ್ಮಶಗಳು ಇರದಂತೆ ನೋಡಿಕೊಳ್ಳುತ್ತಾರೆ. ಇದು ಅತಿ ಶುದ್ಧವಾದ ನೀರು ಮಾತ್ರ ಲಭ್ಯವಾಗುವಂತೆ ಮಾಡುತ್ತದೆ. ರೋಗಿಗಳ ಆರೋಗ್ಯ ಸುರಕ್ಷತೆ ಹೆಚ್ಚಿಸುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ರೀತಿ ಬೈಬ್ಯಾಗ್ ಎಂಬ ಸಾಧನ ಈ ಮೊದಲಿನ ರೀತಿ ಡಯಾಲಿಸಿಸ್ ವೇಳೆ ಅಗತ್ಯವಾದ ರಾಸಾಯನಿಕ ಮಿಶ್ರಣವನ್ನು ವ್ಯಕ್ತಿಗಳು ಮಾಡುವ ಬದಲಾಗಿ ರೋಗಿಗೆ ಅಗತ್ಯವಾಗಿರುವಷ್ಟು ಪ್ರಮಾಣವನ್ನು ತಾನೇ ನಿರ್ಧರಿಸಿ, ದೇಹಕ್ಕೆ ಸೇರ್ಪಡೆ ಮಾಡುತ್ತದೆ. ಇದು ಸಂಪೂರ್ಣ ಸ್ವಯಂಚಾಲಿತವಾಗಿದ್ದು ಅತಿಯಾದ ಅಥವಾ ಕಡಿಮೆ ಪ್ರಮಾಣದ ರಾಸಾಯನಿಕ ದೇಹಕ್ಕೆ ಸೇರುವುದರಿಂದ ರೋಗಿಗೆ ಆಗುವ ಅಪಾಯ ತಡೆಗಟ್ಟುತ್ತದೆ. ರೋಗಿ ಶೀಘ್ರ ಚೇತರಿಸಿಕೊಂಡು ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಲು ನೆರವಾಗುತ್ತದೆ ಎಂದರು.

ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಮಾತನಾಡಿ, ಉದ್ಯೋಗಿಗಳು ದಿನನಿತ್ಯದ ಕೆಲಸ ಕಾರ್ಯಕಗಳಲ್ಲಿ ತೊಡಗಬೇಕಾದ ಕಾರಣ ಸುಮಾರು ನಾಲ್ಕು ಗಂಟೆ ಹಿಡಿಯುವ ಡಯಾಲಿಸಿಸ್ ಅನ್ನು ತಮಗೆ ಹೊಂದಾಣಿಕೆ ಆಗುವ ಅವಧಿಯಲ್ಲಿ ಮಾಡಿಸಿಕೊಳ್ಳಬಹುದಾಗಿದೆ. ಕೆಲವರು ಬೆಳಗಿನ ಜಾವ ನಾಲ್ಕಕ್ಕೇ ಬಂದರೆ, ಕೆಲವರು ಕೆಲಸ ಕಾರ್ಯ ಮುಗಿದ ನಂತರ ಬರುತ್ತಿದ್ದಾರೆ. ನಿತ್ಯ ಈ ರೀತಿ ಸುಮಾರು 70 ಜನರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net