

ವಿಜಯವಾಣಿ ಸುದ್ದಿಜಾಲ ಉಡುಪಿ
ಎಲ್ಲರ ಆರೋಗ್ಯ ರಕ್ಷಣೆ, ಕಾಳಜಿಗಾಗಿ ಕಸ್ತೂರ್ಬಾ ಆಸ್ಪತ್ರೆಯು ಹಲವಾರು ವರ್ಷದಿಂದ ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯ ಒದಗಿಸುತ್ತಿದೆ. ಅಸಂಖ್ಯಾತ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಕರಾವಳಿಯ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ತೊಡಗಿಕೊಂಡು, ಕಲೆಯ ಮೌಲ್ಯ ಹೆಚ್ಚಿಸುತ್ತಿರುವ ಕಲಾವಿದರಿಗೂ ಸಹ ಈ ಕಾರ್ಡ್ ನೀಡಲಾಗುವುದು ಎಂದು ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ ತಿಳಿಸಿದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ನ ಕುಲಾಧಿಪತಿ ಡಾ. ರಾಮದಾಸ ಎಂ. ಪೈ ಅವರ 90ನೇ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ, ಕರಾವಳಿಯ ಎಲ್ಲ ಯಕ್ಷಗಾನ ಕಲಾವಿದರಿಗೆ ಮಣಿಪಾಲ ಆರೋಗ್ಯ ಕಾರ್ಡ್ ನೀಡುವುದಾಗಿ ಸಂಸ್ಥೆ ಘೋಷಿಸಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾಹೆಯ ವೈಸ್ ಚಾನ್ಸೆಲರ್ ಲೆ.ಜ. (ಡಾ.) ಎಂ.ಡಿ. ವೆಂಕಟೇಶ, ಪ್ರೊ ವೈಸ್ ಚಾನ್ಸೆಲರ್ (ತಂತ್ರಜ್ಞಾನ ಮತ್ತು ವಿಜ್ಞಾನ) ಡಾ. ನಾರಾಯಣ ಸಭಾಹಿತ, ಪ್ರೊ ವೈಸ್ ಚಾನ್ಸೆಲರ್ (ಆರೋಗ್ಯ ವಿಜ್ಞಾನ) ಡಾ. ಶರತ್ ರಾವ್, ಮಾಹೆಯ ರಿಜಿಸ್ಟ್ರಾರ್ ಗಿರಿಧರ ಕಿಣಿ, ಮಣಿಪಾಲ ಸಮೂಹ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ ಕಂಟಿಪುಡಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಇತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ದಿಗ್ಗಜರಾದ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ಮಾಹೆಯ ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ, ಭುವನಪ್ರಸಾದ್ ಹೆಗ್ಡೆ, ಸುಧಾಕರ ಆಚಾರ್ಯ ಹಾಗೂ ಯಕ್ಷಗಾನ ಕಲಾವಿದರು ಪಾಲ್ಗೊಂಡಿದ್ದರು.
ಯಕ್ಷಗಾನ ಕಲಾವಿದರಿಗೆ ತ್ವರಿತ ಮತ್ತು ಪರಿಣಾಮಕಾರಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯ ನೀಡಲಾಗುತ್ತಿದೆ. ಈ ಕ್ರಮವು ಸಮುದಾಯದ ಕಲ್ಯಾಣ ಹಾಗೂ ಪ್ರಾದೇಶಿಕ ಕಲಾ ಪ್ರಕಾರದ ಸಂರಕ್ಷಣೆಯಲ್ಲಿ ಮಾಹೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಮಹತ್ವದ ನಿರ್ಧಾರದಲ್ಲಿ ಮಾಹೆ ಕುಲಾಧಿಪತಿ ಡಾ. ರಾಮದಾಸ ಎಂ. ಪೈ ಅವರ ದೂರದೃಷ್ಟಿತ್ವವಿದೆ. | ಡಾ. ಅವಿನಾಶ ಶೆಟ್ಟಿ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ.