ಮಣಿಪಾಲ-ಪೆರಂಪಳ್ಳಿ ರಸ್ತೆ ದುರವಸ್ಥೆ; ಸಾಮಾಜಿಕ ಜಾಲತಾಣದಲ್ಲಿ ಶಾಸಕರ ವಿರುದ್ಧ ಯುವತಿ ತರಾಟೆ

UDP-27-MANIPAL-PERAMPALLI ROAD
Published on

ಉಡುಪಿ: ಮಣಿಪಾಲ-ಪೆರಂಪಳ್ಳಿ-ಅಂಬಾಗಿಲು ರಸ್ತೆ ಕಾಮಗಾರಿ ನಡೆಯುತ್ತಿದ್ದು, ನಿಧಾನಗತಿಯ ಕೆಲಸದಿಂದ ವಾಹನ ಸವಾರರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಸಿಗುವವರೆಗೆ ಶೇರ್ ಮಾಡಬೇಕು ಎಂಬುದಾಗಿ ಶಾಸಕ ರಘುಪತಿ ಭಟ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಂತೆಕಟ್ಟೆಯ ಯುವತಿ ಕೋಮಲ್ ಜೆನಿಫರ್ ಡಿಸೋಜಾ ಅವರ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ.

ಇಷ್ಟು ವರ್ಷಗಳಿಂದ ಟೋಲ್, ರೋಡ್, ವಾಹನ ತೆರಿಗೆ ಕಟ್ಟುತ್ತಿದ್ದೇವೆ. ಇದು ಯಾರ ಹೊಟ್ಟೆಗೆ ಮಣ್ಣು ಹಾಕಲು ಕಟ್ಟುತ್ತಿದ್ದೇವೆ ಹೇಳಿ.. ಹೇಳಿದ್ರೆ ಡ್ರೈನೇಜ್ ಕಟ್ಟಿದ್ದೇವೆ ಅದು ಕಟ್ಟಿದ್ದೇವೆ ಇದು ಕಟ್ಟಿದ್ದೇವೆ ಎಂದು ಹೇಳುತ್ತಾರೆ. ಯಾವುದಾದರೂ ಕೆಲಸ ಸರಿಯಾಗಿ ಮಾಡುತ್ತೀರಾ? ರಘುಪತಿ ಭಟ್ಟರೆ ನಿಮಗೆ ನನ್ನದೊಂದು ಪ್ರಶ್ನೆ. ನೀವು ನಿಮ್ಮ ಮನೆಗೆ ಇದೇ ರಸ್ತೆಯಲ್ಲಿ ಹೋಗುತ್ತೀರಿ. ನಿಮಗೆ ಸ್ವಲ್ಪವೂ ಬೇಸರವಾಗುವುದಿಲ್ಲವೇ? ಎಂದು ಕೋಮಲ್ ಪ್ರಶ್ನಿಸಿದ್ದಾರೆ.

ಮನೆಗೆ ಹೋಗುವಾಗ ಸ್ಕೂಟರ್ ಸವಾರರೊಬ್ಬರು ಹೊಂಡದಲ್ಲಿ ಬಿದ್ದಿದ್ದರು. ಅವರಿಗೆ ಏನಾದರೂ ಆಗಿರುತ್ತಿದ್ದರೆ? ಅವರ ಜೊತೆ ಒಂದು ಮಗುವಿದ್ದರೆ ಏನಾಗುತ್ತಿತ್ತು?. ನೀವು ಸರ್ಕಾರಿ ವಾಹನದಲ್ಲಿ ಓಡಾಡುತ್ತಿರಿ. ನೀವು ಓಡಾಡುವಾಗ ಹೋಂಡ ಇದೆಯೋ? ಹೊಂಡಕ್ಕೆ ಯಾರಾದರೂ ಬಿದ್ದಿದ್ದಾರೋ ಗೊತ್ತಾಗೋದಿಲ್ಲ. ನಾವು ಕಷ್ಟಪಟ್ಟು ಗಾಡಿ ಖರೀದಿ ಮಾಡುತ್ತೇವೆ. ನಮ್ಮ ವಾಹನಕ್ಕೆ ಹಾನಿಯಾದರೆ ಖರ್ಚು ನೀವು ಕೊಡುತ್ತೀರಾ? ಅಂಬಾಗಿಲು ಮಣಿಪಾಲ ರಸ್ತೆ ಫೇವರೆಟ್ ಫಿನಿಷ್ ಯಾಕೆ ಮಾಡಿಲ್ಲ. ಪ್ರಧಾನ ಮಂತ್ರಿ ಬರ್ತಾರೆ ಅನ್ನೋ ಕಾರಣಕ್ಕೆ ಮಂಗಳೂರು ರಸ್ತೆಗಳು ರಿಪೇರಿ ಆಗುತ್ತಿವೆ… ನಮ್ಮ ಊರಿನ ರಸ್ತೆಗಳು ಸರಿಯಾಗಲು ಯಾರು ಬರಬೇಕು? ನಮ್ಮದೇ ತೆರಿಗೆ ಹಣ ಬಳಸಿಕೊಂಡು ಸರಿಯಾದ ರಸ್ತೆ ಮಾಡಿಕೊಡಿ ಎಂದು ಆಗ್ರಹಿಸಿದ್ದರು.

ಈ ವಿಡಿಯೋದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್, ಈಗಾಗಲೇ ಒಂದು ಬಾರಿ ಪ್ಯಾಚ್ ವರ್ಕ ಮಾಡಿದ್ದೆವು. ಕಳೆದ ಬಾರಿ ಜೋರು ಮಳೆಯಾಗಿದ್ದರಿಂದ ರಸ್ತೆ ಹಾಳಾಗಿದೆ. ರಸ್ತೆಯ ಕಾಮಗಾರಿ ಪೂರ್ಣಗೊಂಡಿಲ್ಲ. ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಸಣ್ಣ ಲೇಯರ್ ಡಾಂಬರ್ ಹಾಕಲಾಗಿದೆ. ಇನ್ನು ಎರಡು ಲೇಯರ್ ಡಾಮರ್ ಹಾಕುವುದು ಬಾಕಿ ಇದೆ. ಕಳೆದ ಡಿಸೆಂಬರ್ ತಿಂಗಳಲ್ಲಷ್ಟೇ ಈ ಕಾಮಗಾರಿ ಪ್ರಾರಂಭವಾಗಿದೆ. 26 ಕೋಟಿ ರೂ. ವೆಚ್ಚದಲ್ಲಿ ದ್ವಿಪಥ ರಸ್ತೆಯನ್ನು ಚತುಷ್ಪತ ರಸ್ತೆಯಾಗಿ ಮಾರ್ಪಡಿಸಲಾಗುತ್ತಿದೆ. ಮುಂದಿನ ಡಿಸೆಂಬರ್-ಜನವರಿಯೊಳಗೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ. ಮತ್ತೆ ಏಳೆಂಟು ವರ್ಷ ಯಾವುದೇ ತೊಂದರೆ ಆಗಲ್ಲ. ಅಭಿವೃದ್ಧಿ ಮಾಡಲು ಹೊರಟರೆ ಟೀಕೆ ಬರುತ್ತದೆ. ಅಭಿವೃದ್ಧಿ ಮಾಡದಿದ್ದರೆ ಯಾರು ಟೀಕಿಸುವುದಿಲ್ಲ, ನಾಗರಿಕರಾಗಿ ಅವರಿಗೆ ಪ್ರಶ್ನಿಸುವ ಹಕ್ಕಿದೆ, ಆದರೆ ಯಾರೂ ಗೊಂದಲಕ್ಕೀಡಾಗಬೇಡಿ ಎಂದವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net