ಮಾಹೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕ ಪಠ್ಯಕ್ರಮ

Untitled-1maaahe
Published on

ಉಡುಪಿ: ದೇಶದ ಮುಂಚೂಣಿಯ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಯಾಗಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್(ಎಂಎಎಚ್‌ಇ) ಸಂಸ್ಥೆಯು ನೂತನ ರಾಷ್ಟ್ರೀಯ ಶಿಕ್ಷಣ ನೀತಿ -2020ರ ಅಡಿಯಲ್ಲಿ ನೂತನ ಪಠ್ಯಕ್ರಮಗಳನ್ನು ಪದವಿ ಮತ್ತು ಸ್ನಾತಕೋತ್ತರ ಮಟ್ಟಗಳಲ್ಲಿ ಪರಿಚಯಿಸಲು ನಿರ್ಧರಿಸಿದೆ.

ಎಂಎಎಚ್‌ಇ ಇತ್ತೀಚೆಗೆ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯೊಂದಿಗೆ ಪರಸ್ಪರ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದ್ದು, ಇದರಡಿ ಎಂಎಎಚ್‌ಇಯನ್ನು ಅಧಿಕೃತವಾಗಿ ಶ್ರೇಷ್ಠ ವಿದ್ಯಾಸಂಸ್ಥೆ(ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್) ಎಂದು ಪ್ರಕಟಿಸಲಾಗಿದೆ. ಆದ್ದರಿಂದ ಎಂಎಎಚ್‌ಇ ಭವಿಷ್ಯದಲ್ಲಿ ನೂತನ ಸಂಸ್ಥೆ, ನೂತನ ವಿಭಾಗ ಸೇರ್ಪಡೆಗೊಳಿಸುವ ಯೋಜನೆ ಹೊಂದಿದೆ ಎಂದು ಎಂಎಎಚ್‌ಇನ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ವೆಂಕಟೇಶ್ ಮಂಗಳವಾರ ಆನ್‌ಲೈನ್ ಮೂಲಕ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಂಸ್ಥೆ ದೇಶ ಮತ್ತು ವಿದೇಶಗಳಲ್ಲಿ ನೂತನ ಕ್ಯಾಂಪಸ್‌ಗಳನ್ನು ಸ್ಥಾಪಿಸುವ ಯೋಜನೆಗಳನ್ನು ಹೊಂದಿದೆ. ಉದ್ಯೋಗ ಸೃಷ್ಟಿಗೆ ನೆರವಾಗುವಂತಹ ನೂತನ ಕ್ಯಾಂಪಸ್‌ಗಳನ್ನು ತೆರೆಯುವ ಕಡೆಗೆ ಗಮನಹರಿಸಲಾಗುವುದು. ಸಂಶೋಧನೆ, ನವೀನತೆ, ಉದ್ಯಮಶೀಲತೆ ಹಾಗೂ ಸಹಭಾಗಿತ್ವಗಳಲ್ಲಿ ಗಮನ ಕೇಂದ್ರೀಕರಿಸಲಾಗುವುದು. ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್‌ನ ಪರಿಣಾಮವನ್ನು ಪರಿಗಣಿಸಿ ಸರ್ಕಾರ ಮತ್ತು ವಿಶ್ವವಿದ್ಯಾಲಯ ಅನುದಾನ ಸಮಿತಿಯ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಪಾಲಕರ ಒಪ್ಪಿಗೆ ಜತೆಗೆ ಹಂತ ಹಂತವಾಗಿ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ಗಳಿಗೆ ಆಹ್ವಾನಿಸುವ ಯೋಜನೆಯನ್ನು ಎಂಎಎಚ್‌ಇ ಕೈಗೊಳ್ಳುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಜತೆಗೆ ಸಹಭಾಗಿತ್ವದ ಮೂಲಕ ಉದ್ಯೋಗಾವಕಾಶ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ಸ್ ಪ್ರೊ.ಚಾನ್ಸಲರ್ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಉತ್ತಮ ಪ್ರಯತ್ನದಿಂದ ನಮ್ಮ ಕಾಲೇಜು ಕಳೆದ ಎರಡು ದಶಕಗಳಿಗೂ ಹೆಚ್ಚಿನ ಕಾಲ ದೇಶದ 10 ಅಗ್ರಮಾನ್ಯ ಕಾಲೇಜುಗಳಲ್ಲಿ ಸ್ಥಾನ ಪಡೆದಿದೆ ಎನ್ನಲು ಹೆಮ್ಮೆ ಮತ್ತು ಸಂತಸವಾಗುತ್ತಿದೆ ಎಂದರು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಕುಲಸಚಿವರಾದ ಡಾ. ನಾರಾಯಣ ಸಭಾಹಿತ್ ಉಪಸ್ಥಿತರಿದ್ದರು.

20ರಿಂದ ವರ್ಚುವಲ್ ಘಟಿಕೋತ್ಸವ

ಪ್ರಸಕ್ತ ವರ್ಷದ ಮಾಹೆ ಘಟಿಕೋತ್ಸವ ನ. 20, 21 ಮತ್ತು 22ರಂದು ವರ್ಚುವಲ್ ಮಾದರಿಯಲ್ಲಿ ನಡೆಯಲಿದೆ. ಸುಮಾರು 3500 ಪದವೀಧರರು ನೋಂದಣಿ ಮಾಡಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಂದಾಲ್ ಗ್ಲೋಬಲ್ ಯುನಿವರ್ಸಿಟಿಯ ಕುಲಪತಿ ಡಾ. ಸಿ. ರಾಜ್‌ಕುಮಾರ್, ನೆಸ್ಟೆಲ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಚೇರ್ಮನ್ ಸುರೇಶ್ ನಾರಾಯಣನ್, ಯುಎಸ್‌ಎನ ಫಿಲಡೆಲ್ಫಿಯಾದ ನ್ಯಾಷನಲ್ ಬೋರ್ಡ್ ಆಫ್ ಮೆಡಿಕಲ್ ಎಕ್ಸಾಮಿನರ್ಸ್‌ನ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕಾತ್ಸುಫ್ರಾಕಿಸ್ ಭಾಗವಹಿಸಲಿದ್ದಾರೆ. ಈ ಬಾರಿ ಎಂಎಎಚ್‌ಇ ಘಟಿಕೋತ್ಸವ ಸಮಾರಂಭದಲ್ಲಿ ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಲು ಸೂಚಿಸಲಿದೆ ಎಂದು ಡಾ. ವೆಂಕಟೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net