ಪುತ್ತೂರು: ಮಾಣಿಲ ಶ್ರೀಧಾಮದಲ್ಲಿ ಆ.೨೫ರವರೆಗೆ ನಡೆಯುವ 48 ದಿನಗಳ ಕಾಲ ಸಾಮೂಹಿಕ ಶ್ರೀಲಕ್ಷ್ಮೀಪೂಜೆ ಹಾಗೂ ಆ.25 ರಿಂದ ಆ. 27ರವರೆಗೆ ಶ್ರೀವರಮಹಾಲಕ್ಷ್ಮೀ ವೃತಾಚರಣೆ ಬೆಳ್ಳಿ ಹಬ್ಬದ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಹೊರೆಕಾಣಿಕೆ ಸಮಿತಿ ನೇತೃತ್ವದಲ್ಲಿ ಭಕ್ತ ಜನರ ಸಹಕಾರದೊಂದಿಗೆ ಆ.20ರಂದು ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಹೊರೆಕಾಣಿಕೆ ಪುತ್ತೂರು ವಲಯ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.
ಕ್ಷೇತ್ರದಲ್ಲಿ ಶ್ರೀಗಳು ೪೮ ದಿನಗಳ ಕಾಲ ನಿರಂತರವಾಗಿ ವರಮಹಾಲಕ್ಷ್ಮಿ ವೃತಾಚರಣೆ ಪೂಜೆ ನಡೆಯುತ್ತಿದ್ದು, ಇದರ ಜೊತೆಗೆ ೨೫ ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಿಂದ ಬೃಹತ್ ಹೊರಕಾಣಿಕೆಯ ಜೊತೆಗೆ ದೇಣಿಗೆ ಸಮರ್ಪಿಸಬೇಕೆಂದು ಮಾಡಿದ ಸಂಕಲ್ಪದಂತೆ ಆ.20ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ಗದ್ದೆಯಿಂದ ಬೃಹತ್ ಹೊರೆಕಾಣಿಕೆಯನ್ನು ಮೆರವಣಿಗೆ ಮೂಲಕ ಶ್ರೀಕ್ಷೇತ್ರಕ್ಕೆ ಒಪ್ಪಿಸಲಾಗುವುದು. ಈ ನಿಟ್ಟಿನಲ್ಲಿ ಆ.18ರಂದು ಹೊರೆಕಾಣೀಕೆ ಸ್ವೀಕೃತಿ ಕೌಂಟರ್ ತೆರೆಯಲಾಗುವುದು ಎಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಹೊರೆಕಾಣಿಕೆ ಸಮಿತಿ ಸಂಚಾಲಕ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ ಹಿಂದು ಧಾರ್ಮಿಕ ಭಾವನೆಯಲ್ಲಿ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪೂರಕವಾಗಿ ಹೊರೆಕಾಣಿಕೆ ಸಮರ್ಪಣೆ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ 48 ದಿನಗಳ ಕಾಲ ನಡೆಯುವ ಪೂಜೆಯಲ್ಲಿ ಹಲವು ಖರ್ಚುಗಳಿವೆ. ಈನಿಟ್ಟಿನಲ್ಲಿ ಕ್ಷೇತ್ರಕ್ಕೆ ಪುತ್ತೂರು ಸಮಿತಿಯಿಂದ ರೂ. 5ಲಕ್ಷವನ್ನು ಆರ್ಥಿಕ ರೂಪದಲ್ಲಿ ನೀಡಲಾಗುತ್ತದೆ. ಉಳಿದಂತೆ ಇಲ್ಲಿ ಯಾರಿಗೂ ಹೊರೆಯಾಗದ ರೀತಿಯಲ್ಲಿ ಹೊರೆಕಾಣಿಕೆ ಸ್ವೀಕರಿಸಲಾಗುವುದು. ಭಕ್ತರು ಮತ್ತು ಕ್ಷೇತ್ರದ ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ಹೊರೆಕಾಣಿಕೆ ಸಮರ್ಪಣೆ ಮಾಡುಬಹುದು ಎಂದು ತಿಳಿಸಿದರು.
ಹೊರೆಕಾಣಿಕೆ ಸಮಿತಿ ಪುತ್ತೂರು ವಲಯ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಕಾರ್ಯಾಧ್ಯಕ್ಷ ಲಕ್ಷ್ಮಣ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.