

ವಿಟ್ಲ: ಯಾಂತ್ರಿಕ ಬದುಕಿನಲ್ಲಿ ಬೇಕು ಬೇಡಗಳನ್ನು ನಿಯಂತ್ರಿಸಲು ಗುರು ಮತ್ತು ಗುರಿ ಅತ್ಯವಶ್ಯಕ. ಭಕ್ತಿ ಆಡಂಬರ, ತೋರಿಕೆಗೆ ಸೀಮಿತವಾಗದೆ, ಆಂತರ್ಯದಿಂದ ಸಮರ್ಪಣೆಯಿಂದ ಕೂಡಿರಬೇಕು. ಲೋಕಹಿತ ಭಯಸುವುದು ಸನಾತನ ಧರ್ಮದ ಆಶಯ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಅಂಗವಾಗಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಮುಂಬೈ ಕಿಟ್ವಾಲ ಭ್ರಾಮರಿ ಆಶ್ರಮದ ಸಾಽ ಸ್ವರದಾ ಗೀತಾ ನಂದಿನಿ ಸಾನ್ನಿಧ್ಯ ವಹಿಸಿದ್ದರು. ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮೋನಪ್ಪ ಭಂಡಾರಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಉದ್ಯಮಿಗಳಾದ ಬಾಲಕೃಷ್ಣ ರೈ, ರಜನಿ ಬಾಲಕೃಷ್ಣ ರೈ, ಭಾಸ್ಕರ ಶೆಟ್ಟಿ ಪುಣೆ, ಮೋಹನದಾಸ ಪೂಜಾರಿ ಸೂರತ್, ಗಿರೀಶ್ ಪಿ. ಸಾಲ್ಯಾನ್, ಶ್ರೀನಿವಾಸ್ ಶೇಟ್, ಭುಜಬಲಿ ಧರ್ಮಸ್ಥಳ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಮುಂಬೈ ಕುಲಾಲ ಸಂಘ ಅಧ್ಯಕ್ಷ ರಘು ಎ., ಮಾಜಿ ಅಧ್ಯಕ್ಷ ದೇವದಾಸ ಕುಲಾಲ್, ಶ್ರೀಧಾಮ ಮಿತ್ರ ವೃಂದ ಅಧ್ಯಕ್ಷ ಬಾಲಕೃಷ್ಣ ರೈ ಕೆಳಗಿನಮನೆ, ಶ್ರೀಧಾಮ ಸೇವಾ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಟ್ರಸ್ಟಿ ಚಂದ್ರ ಶೇಖರ ಮೂಲ್ಯ ವಂದಿಸಿದರು. ಎಸ್.ಕೆ.ನೈನಾಡು ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕಾರ್ಯಕ್ರಮ
ಬೆಳಗ್ಗೆ ದ್ವಾದಶಾ ನಾಳಿಕೇರ ಗಣಪತಿ ಹೋಮ, ಚಂಡಿಕಾ ಹೋಮ, ಕನಕಧಾರಾ ಯಾಗ, ಲಕ್ಷ್ಮೀನಾರಾಯಣ ಹೃದಯ ಹೋಮ, ಸಾಮೂಹಿಕ ಕುಂಕುಮಾರ್ಚನೆ, ಶ್ರೀ ವರಮಹಾಲಕ್ಷ್ಮೀ ಪೂಜೆ, ವಸೋರ್ದ್ಧಾರೆ, ಯಾಗದ ಪೂರ್ಣಾಹುತಿ, ಮಹಾಮಂಗಳಾರತಿ, ಸಂಜೆ ಶ್ರೀದುರ್ಗಾ ಪೂಜೆ, ಸಪ್ತಶತಿ ಪಾರಾಯಣ, ಅಷ್ಟಾವಧಾನ ಸೇವೆ, ರಾತ್ರಿ ಮಹಾಮಂಗಳಾರತಿ, ಯಕ್ಷಗಾನ ಬಯಲಾಟ ಜರುಗಿತು.