ಪ್ರಣಾಳಿಕೆ ಜನರ ವಂಚಿಸುವ ಮಂತ್ರದಂಡ

20NGD3
ನಂಜನಗೂಡಿನಲ್ಲಿ ಆಯೋಜಿಸಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ರೈತ ಸಂಘಟನೆ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿದರು. ಪಿ.ಸೋಮಶೇಖರ್, ದೇವನೂರು ವಿಜಯೇಂದ್ರ, ಅಂಬಳೆ ಮಂಜುನಾಥ್, ಅಲತ್ತೂರು ಪುಟ್ಟಸ್ವಾಮಿ, ಸಿಂಧುವಳ್ಳಿ ಬಸವಣ್ಣ, ಕಮಲಮ್ಮ, ಶಿವಶಂಕರ್ ಇದ್ದರು.\
Published on

ನಂಜನಗೂಡು: ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಹೊರತಂದಿರುವ ಪ್ರಣಾಳಿಕೆಗಳು ಜನರನ್ನು ವಂಚಿಸುವ ಮಂತ್ರದಂಡಗಳಾಗಿದ್ದು, ಈ ಪ್ರಣಾಳಿಕೆಗಳಿಂದ ರೈತರಿಗೆ ಯಾವುದೇ ಉಪಯೋಗವಾಗಿರುವುದಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.


ನಂಜನಗೂಡು ನಗರದಲ್ಲಿ ಶನಿವಾರ ಆಯೋಜಿಸಿದ್ದ ರೈತರ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದರು.
ಬರದ ಸಂದರ್ಭದಲ್ಲಿ ರೈತರ ಕಷ್ಟ ಅರಿಯದ, ಬರ ಪರಿಹಾರ ನೀಡದ ಬಿಜೆಪಿಗೆ ರೈತರ ವೋಟು ಕೇಳುವ ನೈತಿಕತೆ ಇಲ್ಲ. ಇನ್ನು ರಾಜಕೀಯ ಕ್ಷೇತ್ರ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭಗಳಿಸುವ ಕ್ಷೇತ್ರವಾಗಿದೆ ಎಂದು ಎಲ್ಲರೂ ಚುನಾವಣೆಗೆ ಪೈಪೋಟಿ ನಡೆಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಂಕಷ್ಟ ಕಾಲದಲ್ಲಿ ಪರಸ್ಪರ ಜಗಳವಾಡುತ್ತಾ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಇದರಿಂದ ರೈತರ ಹೊಟ್ಟೆ ತುಂಬುವುದಿಲ್ಲ ಎಂದು ಕಿಡಿಕಾರಿದರು.


ರೈತರ ಕಷ್ಟ ಆಲಿಸಲು ಯಾರು ಇಲ್ಲವಾಗಿದ್ದಾರೆ. ಹಳ್ಳಿಗಳಲ್ಲಿ ಕುಡಿಯುವ ನೀರು, ದನಕರುಗಳಿಗೆ ಮೇವು ಸಿಗದಂತಾಗಿದೆ. ಅಧಿಕಾರಿಗಳು ಚುನಾವಣೆ ನೆಪ ಹೇಳಿ ರೈತರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರು ಬತ್ತಿವೆ. ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ. ಕಾಡಂಚಿನ ಭಾಗದ ರೈತರ ಬೆಳೆಗಳನ್ನು ಕಾಡುಪ್ರಾಣಿಗಳು ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರು ತೊಂದರೆಗೊಳಗಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ತಾಲೂಕ ಅಧ್ಯಕ್ಷ ದೇವನೂರು ವಿಜಯೇಂದ್ರ, ಅಂಬಳೆ ಮಂಜುನಾಥ್, ಅಲತ್ತೂರು ಪುಟ್ಟಸ್ವಾಮಿ, ಸಿಂಧುವಳ್ಳಿ ಬಸವಣ್ಣ, ಕಮಲಮ್ಮ, ಶಿವಶಂಕರ್ ಬಿಳಿಗೆರೆ, ಅತ್ತಹಳಿ ದೇವರಾಜ್, ಕಿರಗಸೂರು ಶಂಕರ್, ಬರಡನಪುರ ನಾಗರಾಜು, ನೀಲಕಂಠಪ್ಪ, ರೇವಣ್ಣ ಸೇರಿದಂತೆ ನೂರಾರು ಮಂದಿ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net