

ಮಡಿಕೇರಿ:
ಕಾಫಿ ಪ್ರಧಾನ ಬೆಳೆಯಾಗಿರುವ ಕೊಡಗಿನಲ್ಲಿ ಕೆಲ ಪ್ರಯೋಗಶೀಲ ರೈತರು ವಿವಿಧ ಹಣ್ಣಿನ ಬೆಳೆಗಳನ್ನು ಬೆಳೆಯುವುದರ ಮೂಲಕವೂ ಆರ್ಥಿಕ ಸಬಲೀಕರಣದತ್ತ ಹೆಜ್ಜೆ ಹಾಕುತ್ತಿದ್ದಾರೆ. ಅದರಲ್ಲೂ ಇಲ್ಲಿಯ ಹವಾಮಾನ ವಿದೇಶಿ ಹಣ್ಣುಗಳನ್ನು ಬೆಳೆಯುವುದಕ್ಕೆ ಹೆಚ್ಚು ಸೂಕ್ತವಾಗಿರುವುದರಿಂದ ಈ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ. ಇದೀಗ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮ್ಯಾಂಗೋಸ್ಟೀನ್ ಹಣ್ಣಿನ ಬಗ್ಗೆ ಬೆಳೆಗಾರರಿಗೆ ಪರಿಚಯ ಮಾಡಲು ಹೊರಟಿದೆ.
ಹಣ್ಣಿನ ಸಂಶೋಧನೆಗಾಗಿ 1947ರಲ್ಲಿ ಕುಶಾಲನಗರ ತಾಲೂಕು ಚೆಟ್ಟಳ್ಳಿಯಲ್ಲಿ ಆರಂಭವಾದ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಬದಲಾದ ಕಾಲಮಾನದಲ್ಲಿ ವರ್ತಮಾನದ ಅಗತ್ಯತೆಗಳಿಗೆ ಸಂಬAಧಿಸಿದAತೆ ಆಗಾಗ್ಗೆ ಅಪ್‌ಡೇಟ್ ಆಗುತ್ತಿರುತ್ತದೆ. ಇಲ್ಲಿ ಈಗ ಕೇವಲ ಕಿತ್ತಳೆಯ ಸಂಶೋಧನೆ ಮಾತ್ರ ಆಗುತ್ತಿಲ್ಲ. ಕೊಡಗಿನ ಹವಾಮಾನಕ್ಕೆ ಸೂಕ್ತವಾಗಬಲ್ಲ ವಿದೇಶಿ ಹಣ್ಣುಗಳ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿದೆ. ಸ್ಥಳೀಯವಾಗಿ ಹಲವು ತಳಿಗಳನ್ನೂ ರೂಪಿಸಲಾಗಿದೆ.
ಲಿಚ್ಚಿ, ರ‍್ಯಾಂಬುಟನ್, ಬಟರ್‌ಫ್ರೂಟ್.. ಹೀಗೆ ವಿವಿಧ ವಿದೇಶಿ ಹಣ್ಣುಗಳ ಬಗ್ಗೆ ಇಲ್ಲಿ ಸಂಶೋಧನೆಗಳು ನಡೆಯುತ್ತಿದೆ. ಇಲ್ಲಿ ರೂಪಿಸಲಾದ ಈ ಹಣ್ಣಿನ ಗಿಡಗಳನ್ನು ತೆಗೆದುಕೊಂಡು ಹೋಗಿ ರೈತರು ತಮ್ಮ ತೋಟದಲೂ ಬೆಳೆಸಿ ಯಶ ಕಂಡಿದ್ದಾರೆ. ಇದೀಗ ಮತ್ತೊಂದು ವಿದೇಶಿ ಹಣ್ಣು ಮ್ಯಾಂಗೋಸ್ಟೀನ್ ಅನ್ನು ಬೆಳೆಗಾರರಿಗೆ ಪರಿಚಯಿಸಲು ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮುಂದಾಗಿದೆ. ಮಾರುಕಟ್ಟೆಯಲ್ಲಿ ದುಬಾರಿಯಾಗಿರುವ ಈ ಹಣ್ಣು ರೈತರ ಪಾಲಿಗೆ ಅದೃಷ್ಟ ಲಕ್ಷಿö್ಮÃಯೇ ಆಗುವುದರಲ್ಲಿ ಸಂಶಯವಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಕಳೆದ ಕೆಲವು ವರ್ಷಗಳಿಂದ ಮ್ಯಾಂಗೋಸ್ಟೀನ್ ಹಣ್ಣಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಈ ಹಣ್ಣಿನ ಬೆಳೆಯ ಋಣಾತ್ಮಕ ಮತ್ತು ಧನಾತ್ಮಕ ಅಂಶಗಳ ಬಗ್ಗೆ ಕೇಂದ್ರದ ವಿಜ್ಞಾನಿಗಳು ನಿಗಾ ಇಟ್ಟಿದ್ದು, ಕೊಡಗಿನ ಹವಾಮಾನಕ್ಕೂ ಈ ಬೆಳೆ ಸೂಕ್ತ ಎನ್ನುವುದನ್ನು ಕಂಡುಕೊAಡಿದ್ದಾರೆ. ಕೊಡಗು ಮಾತ್ರವಲ್ಲದೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನದ ಕೆಲವು ಭಾಗಗಳಲ್ಲೂ ಈ ಹಣ್ಣು ಬೆಳೆಯಬಹುದಾಗಿದೆ.
ಹಣ್ಣಿನ ರಾಜಾ ಎಂದು ಮಾವಿನ ಹಣ್ಣನ್ನು ಕರೆದರೆ, ಮ್ಯಾಂಗೋಸ್ಟೀನ್ ಹಣ್ಣನ್ನು ಹಣ್ಣಿನ ರಾಣಿ ಎಂದು ಗುರುತಿಸಲಾಗುತ್ತದೆ. ದೇವರ ಆಹಾರ ಎಂದು ಕೂಡ ಈ ಹಣ್ಣನ್ನು ಕರೆಯುವುದಿದೆ. ಇದು ಉಷ್ಣವಲಯದ ಹಣ್ಣು. ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಹೆಚ್ಚಾಗಿ ಕಾಣಬಹುದು. ಇದನ್ನು ನೇರಳೆ ಮ್ಯಾಂಗೋಸ್ಟೀನ್ ಎಂದೂ ಕರೆಯಲಾಗುತ್ತದೆ. ಭಾರತದ ಹಲವೆಡೆ ಈಗಾಗಲೇ ಇದನ್ನು ಬೆಳೆಯುತ್ತಿದ್ದಾರೆ.
ಹಣ್ಣಿನ ಬೀಜದಿಂದ ನೇರವಾಗಿ ಗಿಡ ಮಾಡಬಹುದು. ಒಂದು ಗಿಡ ಫಲ ಕೊಡಲು ಸುಮಾರು 8 ವರ್ಷ ಬೇಕಾಗುತ್ತದೆ. ಹಾಗಾಗಿಯೇ ಈ ಹಣ್ಣು ಬೆಳೆಯಲು ಕೃಷಿಕರು ಆಸಕ್ತಿ ತೋರಿಸುವುದಿಲ್ಲ. ಆದರೆ ಒಮ್ಮೆ ಹಣ್ಣಿನ ಗಿಡದಲ್ಲಿ ಫಸಲು ಬಿಡಲಾರಂಭಿಸಿದರೆ ಕೈ ತುಂಬಾ ಕಾಸು ಹಿಡಿಯಬಹುದು ಎನ್ನುತ್ತಾರೆ ಸಂಶೋಧಕರು. ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಕೆಜಿಗೆ ಸುಮಾರು 800 ರೂ. ಬೆಲೆ ಇದೆ. ತೋಟಗಳಿಂದ ನೇರವಾಗಿ ಖರೀದಿಸುವಾಗ ಕನಿಷ್ಠ ಕೆಜಿಗೆ 400 ರೂ. ಸಿಗುತ್ತದೆ. ಹಾಗಾಗಿಯೇ ಇದನ್ನು ಕಾಫಿತೋಟಗಳಲ್ಲಿ ಉತ್ತಮ ಮಿಶ್ರಬೆಳೆ ಆಗಬಲ್ಲದು ಎಂದು ಹೇಳಲಾಗುತ್ತಿದೆ.
ಬೆಳೆಗಾರರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಬಲ್ಲ ಮ್ಯಾಂಗೋಸ್ಟೀನ್ ಹಣ್ಣಿನ ಕ್ಷೇತ್ರೋತ್ಸವವನ್ನು ಇದೇ ಮೊದಲ ಬಾರಿಗೆ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಅ.19 (ಶನಿವಾರ) ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮ್ಯಾಂಗೋಸ್ಟೀನ್ ಜತೆಗೆ ರ‍್ಯಾಂಬುಟನ್ ಕ್ಷೇತ್ರೋತ್ಸವವನ್ನೂ ನಡೆಸಲಾಗುತ್ತಿದೆ. ಬಟರ್‌ಫ್ರೂಟ್ ವೈವಿಧ್ಯತೆಯ ಮೇಳವೂ ಅಂದು ನಡೆಯಲಿದೆ. ಮ್ಯಾಂಗೋಸ್ಟೀನ್ ಮತ್ತು ರ‍್ಯಾಂಬುಟನ್ ಹಣ್ಣಿನ ವೈಜ್ಞಾನಿಕ ಕೃಷಿ ಬಗ್ಗೆ ಕೇಂದ್ರದ ಹಣ್ಣು ವಿಜ್ಞಾನಿ ಡಾ. ಬಿ.ಎಂ. ಮುರಳೀಧರ್ ಮಾಹಿತಿ ನೀಡಲಿದ್ದಾರೆ. ಆಸಕ್ತ ಬೆಳೆಗಾರರಿಗೆ ಈ ಸಂದರ್ಭದಲ್ಲಿ ಮ್ಯಾಂಗೋಸ್ಟೀನ್ ಗಿಡಗಳು ಖರೀದಿಗೂ ಲಭ್ಯ ಇರುತ್ತದೆ.
ಅ.19ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ. ಒಬ್ಬ ರೈತನ ಜಮೀನಿನಲ್ಲಿ ವಿಶಿಷ್ಟ ತಳಿಯ ಯಾವುದಾದರೂ ಪ್ರಬೇಧ ಇದ್ದರೆ ಅದರ ತಳಿ ಸಂವರ್ಧನೆ ಹೇಗೆ ಮಾಡಬಹುದು ? ಇದರಲ್ಲಿ ರೈತನ ಹಕ್ಕುಗಳು ಏನು ಎಂಬುದರ ಬಗ್ಗೆ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ನೋಂದಣಿ ಅಧಿಕಾರಿ ಡಾ. ದೀಪಾಲ್ ರಾಜ್ ಚೌಧರಿ ಮಾಹಿತಿ ನೀಡಲಿದ್ದಾರೆ. ಇದರ ಜತೆಗೆ ರೈತರು ತಮ್ಮಲ್ಲಿ ಬೆಳೆದಿರುವ ವಿವಿಧ ಮಾದರಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಉತ್ತಮ ತಳಿಯ ಹಣ್ಣುಗಳಿಗೆ ಪ್ರಥಮ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ತೃತೀಯ ಬಹುಮಾನ 2 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 78928 82351 ಸಂಪರ್ಕಿಸಬಹುದಾಗಿದೆ.
ಹಣ್ಣುಗಳನ್ನು ಬೆಳೆಯುವ ಬೆಳೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಗತಿಪರ ಬೆಳೆಗಾರರನ್ನು ಗುರುತಿಸಿ ಗೌರವಿಸುವ ಕೆಲಸವನ್ನೂ ಕೇಂದ್ರದಲ್ಲಿ ಮಾಡಲಾಗುತ್ತಿದೆ. ಇಂಥ ಮೂವರನ್ನು ಅ.19 ರಂದು ಸನ್ಮಾನಿಸಲಾಗುತ್ತಿದೆ. ಕೊಡಗಿನ ವಿಶೇಷ ಗುಮ್ಮಟೆ ಹಣ್ಣು, ಫ್ಯಾಷನ್ ಫ್ರೂಟ್ ತಳಿ ರಕ್ಷಣೆ ಮಾಡುವುದರ ಜತೆಗೆ ಆದಿ ಪೆಪ್ಪರ್ ಎನ್ನುವ ಕರಿಮೆಣಸು ತಳಿ ಹಾಗೂ ಗಂಡು ರೆಕ್ಕೆ ಪದ್ಧತಿಯಲ್ಲಿ ಕಾಫಿ ಗಿಡಗಳ ಶೋಧನೆ ಮಾಡಿರುವ ಗರ್ವಾಲೆ ಗ್ರಾಮದ ನಾಪಂಡ ಪೂಣಚ್ಚ, ರ‍್ಯಾಂಬುಟನ್, ಲಿಚ್ಚಿ, ಮ್ಯಾಂಗೋಸ್ಟೀನ್, ಬಟರ್ ಫ್ರೂಟ್ ಬೆಳೆದು ಹೆಸರು ಮಾಡಿರುವ ಚೆಯ್ಯಂಡಾಣೆಯ ಸುಧೀರ್ ಮಕ್ಕಿಮನೆ ಹಾಗೂ ಕೊಡಗಿನ ಕಾಡು ಹಣ್ಣುಗಳನ್ನು ರಕ್ಷಣೆ ಮಾಡಿ ಅವುಗಳ ತಳಿ ಸಂವರ್ಧನೆ ಮಾಡುವುದಲ್ಲದೆ ಇತರರಿಗೂ ಬೆಳೆಯಲು ಪ್ರೋತ್ಸಾಹ ಕೊಡುತ್ತಿರುವ ಪೇರೂರು ಗ್ರಾಮದ ವಾಸು ಕಾರ್ಯಪ್ಪ ಅವರನ್ನು ಸನ್ಮಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಮ್ಯಾಂಗೋಸ್ಟೀನ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ತುಂಬಾ ರುಚಿಯಾದ ಹಣ್ಣು. ಕೊಡಗಿನ ಹವಾಮಾನಕ್ಕೆ ಈ ಹಣ್ಣು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಬೀಜದಿಂದಲೇ ನೇರವಾಗಿ ಗಿಡ ಮಾಡಿ ಬೆಳೆಸಲಾಗುತ್ತದೆ. ಶನಿವಾರದ ಕಾರ್ಯಕ್ರಮದಲ್ಲಿ ಈ ಹಣ್ಣಿನ ವೈಜ್ಞಾನಿಕ ಕೃಷಿ ಬಗ್ಗೆ ಮಾಹಿತಿ ನೀಡಲಾಗುವುದು. ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಉಪನ್ಯಾಸವೂ ಇರಲಿದೆ.
ಡಾ. ಬಿ.ಎಂ. ಮುರಳೀಧರ್, ಹಣ್ಣು ವಿಜ್ಞಾನಿ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಚೆಟ್ಟಳ್ಳಿ