

ಶ್ರೀನಿವಾಸಪುರ: ಇಲ್ಲಿನ ಪಲ್ಪ್ ಫ್ಯಾಕ್ಟರಿ ಬಳಿ ಮಂಗಳವಾರ ರಾತ್ರಿ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮಾವನ್ನು 40ಕ್ಕೂ ಹೆಚ್ಚು ಲಾರಿಗಳಲ್ಲಿ ತಂದಿದ್ದನ್ನು ಕಂಡ ಸ್ಥಳಿಯ ರೈತ ಸಂಘಟನೆಗಳ ಮುಖಂಡರು, ಮಾವು ಬೆಳೆಗಾರರು ಮಾಲೀಕರ ನಡೆ ವಿರೋಧಿಸಿ ಪ್ರತಿಭಟಿಸಿದರು.
ಪಲ್ಪ್ ಫ್ಯಾಕ್ಟರಿ ಮಾಲೀಕರು ಸ್ಥಳಿಯ ರೈತರ ಮಾವನ್ನು ಖರೀದಿಸದೆ ಆಂಧ್ರಪ್ರದೇಶದ ಮಾವು ಖರೀದಿಸಲು ಮುಂದಾಗಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತರು ಮತ್ತು ಪಲ್ಪ್ ಫ್ಯಾಕ್ಟರಿ ಮಾಲೀಕರ ಮಧ್ಯೆ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯ ಪ್ರವೇಶವಾಯಿತು. ತಹಸೀಲ್ದಾರ್ ಸುಧೀಂದ್ರ ಕೂಡ ಸ್ಥಳಕ್ಕೆ ಆಗಮಿಸಿ ಸ್ಥಳಿಯರ ಮಾವು ಖರೀದಿಸುವಂತೆ ಸೂಚನೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ರೈತರ ಆರೋಪ: ಜಿಲ್ಲೆಯ ಮಾವನ್ನು ಆಂಧ್ರಪ್ರದೇಶದ ಚಿತ್ತೂರು ಬಳಿಯಿರುವ ಪಲ್ಪ್ಫ್ಯಾಕ್ಟರಿಗಳಲ್ಲಿ ಖರೀದಿಸುತ್ತಿಲ್ಲ. ಅಲ್ಲಿನ ಜಿಲ್ಲಾಡಳಿತ ಕೋಲಾರದ ಮಾವನ್ನು ಆಂಧ್ರಪ್ರದೇಶಕ್ಕೆ ಬಿಡದಂತೆ ತಡೆದಿದ್ದರೂ ಶ್ರೀನಿವಾಸಪುರದಲ್ಲಿರುವ "ಆಸ್ಪೆಟಿಕ್ ಕ್ವಾಲಿಟಿ ಫುಡ್ಸ್ ಲಿಮಿಟೆಡ್' ಕಂಪನಿ ಆಂಧ್ರದ ಬೆಳೆ ಖರೀದಿಸಲು ಮುಂದಾಗಿದೆ ಎಂದು ದೂರಿದರು.
ಶ್ರೀನಿವಾಸಪುರದಲ್ಲಿ 2 ಪಲ್ಪ್ಫ್ಯಾಕ್ಟರಿಗಳಿದ್ದು, ನಮ್ಮ ಮಾವನ್ನು ಖರೀದಿಸದೆ ಬೇರೆ ರಾಜ್ಯದ ಬೆಳೆ ಖರೀದಿಸಿ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಹಸೀಲ್ದಾರ್ ಸುಧೀಂದ್ರ ಮತ್ತು ಪೊಲೀಸರು ಪಲ್ಪ್ಫ್ಯಾಕ್ಟರಿ ಮಾಲೀಕ ಮಂಜುನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ತೋತಾಪುರಿ ತರಬೇಡಿ ಎಂದು ನಾಮಫಲಕ ಹಾಕಿದ್ದು, ಕೆಜಿ 3 ರೂ.ಗೆ ಮಾರಿದರೂ ಕೇಳುವವರಿಲ್ಲದಂತಾಗಿದೆ. ಇಲ್ಲಿನ ಪಲ್ಪ್ಫ್ಯಾಕ್ಟರಿಗಳವರು ಆಂಧ್ರದ ಮಾವನ್ನು ಖರೀದಿಸುತ್ತಾರೆ ಎಂದರೆ ಯಾವ ನ್ಯಾಯ?. ಜಿಲ್ಲಾಡಳಿತ ಕೂಡಲೆ ಪಲ್ಪ್ಫ್ಯಾಕ್ಟರಿಗೆ ಸೂಚನೆ ನೀಡಿ ಸ್ಥಳಿಯ ಮಾವು ಖರೀದಿಸುವಂತೆ ಮಾಡಬೇಕು. > ಚಿನ್ನಪ್ಪರೆಡ್ಡಿ ಜಿಲ್ಲಾ ಮಾವು ಬೆಳೆಗಾರರ ಅಧ್ಯಕ್ಷ ಕೊಯ್ಲು ಮಾಡುವ ಪದ್ಧತಿ ನಮ್ಮಲ್ಲಿ ಸರಿ ಇಲ್ಲ. ಕಳಪೆ ಕಾಯಿ ಹಾಗೂ ಋತುವಿಗೆ ಬರದಿದ್ದರೂ ಕಟಾವು ಮಾಡಿ ತರುತ್ತಿದ್ದಾರೆ. ಇದರಿಂದ ತೆಗೆದ ಪಲ್ಪ್ ಕೊಳೆಯುವಂತಾಗುತ್ತದೆ. ನಮಗೆ ನಷ್ಟ ಆದರೆ ಯಾರು ಕಟ್ಟಿಕೊಡುತ್ತಾರೆ? ಸರ್ಕಾರದಿಂದ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಪಲ್ಪ್ ಶೇಖರಣೆ ಮಾಡುವ ಡ್ರಮ್ಗಳು ಮತ್ತು ಬ್ಯಾಗ್ಗಳ ಬೆಲೆ ಹೆಚ್ಚಾಗಿದೆ. ಪಲ್ಪ್ ಮಾರಾಟ ಮಾಡಲು ಜಿಎಸ್ಟಿ ಹೆಚ್ಚಾಗಿದೆ. ಎಲ್ಲ ಉತ್ಪನ್ನಗಳನ್ನು ಖರೀದಿದಾರರೆ ನೀಡುತ್ತಿರುವುದರಿಂದ ಅವರು ಸೂಚಿಸಿದ ಗುಣಮಟ್ಟವನ್ನೆ ನಾವು ಅವರಿಗೆ ನೀಡಬೇಕಾಗಿದೆ. ಆಂಧ್ರಪ್ರದೇಶದ ಮಾವು ಗುಣಮಟ್ಟದಿಂದ ಕೂಡಿರುತ್ತದೆ. ಆದ್ದರಿಂದ ಅಲ್ಲಿಂದ ಖರೀದಿಸುತ್ತಿದ್ದೇವೆ. > ಮಂಜುನಾಥ್ ಆಸ್ಪೆಟಿಕ್ ಕ್ವಾಲಿಟಿ ಪುಡ್ಸ್ ಲಿಮಿಟೆಡ್ ಮಾಲೀಕ ಸ್ಥಳಿಯ ಮಾವನ್ನು ಜೂ.23 ರಿಂದ ಖರೀದಿ ಮಾಡಲು ಒಪ್ಪಿಗೆ ನೀಡಿದ್ದಾರೆ. ಈಗ ಬಂದಿರುವ 400 ಟನ್ ಮಾವು ಮುಗಿದ ನಂತರ ಆಂಧ್ರ ಪ್ರದೇಶದ ಮಾವು ತರಿಸುವುದಿಲ್ಲ ಎಂಬ ಭರವಸೆಯನ್ನು ಫ್ಯಾಕ್ಟರಿ ಮಾಲೀಕ ಮಂಜುನಾಥ್ ನೀಡಿದ್ದಾರೆ. ನಾವೂ ಎಚ್ಚರಿಕೆ ನೀಡಿದ್ದೇವೆ. > ಸುಧೀಂದ್ರ ತಹಸೀಲ್ದಾರ್, ಶ್ರೀನಿವಾಸಪುರ.