ಬಿಸಿಲಿಗೆ ಉದುರುತ್ತಿದೆ ಮಾವು

Rmgm-Ph-003-Mavu Bele Nasta-Bisilu-Story Photo-29-4-2024
Published on
  • ತೊಟ್ಟಿನಲ್ಲೇ ಬೆಂಡಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಕಾಯಿಗಳು
  • ಔಷಧ, ತೋಟ ನಿರ್ವಹಣೆಗೆ ಹೆಚ್ಚಿದ ಖರ್ಚು
  • ರೈತರಿಗೆ ಆರ್ಥಿಕ ನಷ್ಟದ ಭೀತಿ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಬಿಸಿಲ ಜಳಕ್ಕೆ ತೊಟ್ಟಿನಲ್ಲೇ ಮಾವಿನಕಾಯಿಗಳು ಬಾಡಿ ಬೆಂಡಾಗಿ ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕುದುರುತ್ತಿದ್ದು, ಲಾಭದ ಸಿಹಿ ತರಬೇಕಿದ್ದ ಮಾವು ಜಿಲ್ಲೆಯ ಬೆಳೆಗಾರರಿಗೆ ಕಹಿಯಾಗಿದೆ.


ಜಿಲ್ಲೆಯಲ್ಲಿ ಮಾವು ವಾಣಿಜ್ಯ ಬೆಳೆಯಾಗಿದೆ. ಈ ಭಾರಿ ಮಾವು ರೈತನ ಕೈ ಹಿಡಿಯದೆ ಬರಗಾಲದ ವಾತಾವರಣದಲ್ಲಿನ ಬದಲಾವಣೆಯಿಂದ ಜೋನಿ ರೋಗದಿಂದ ಹೂವು ಬಿಡುವ ವೇಳೆಯೇ ಹಲವು ಸಮಸ್ಯೆ ಎದುರುಗೊಂಡು, ಉತ್ತಮ ಮಾವು ಫಸಲಿನ ನಿರೀಕ್ಷೆ ಹುಸಿಯಾಗಿದ್ದು, ರೈತರಿಗೆ ಔಷಧ ಹಾಗೂ ತೋಟ ನಿರ್ವಹಣೆಯ ಖರ್ಚು ಸಿಗದಂತಾಗಿದೆ.


ಇಂತಹ ಸಮಯದಲ್ಲಿ ಇದ್ದ ಫಸಲಿನಲ್ಲಿಯೇ ಒಂದಷ್ಟು ಲಾಭದ ಆಸೆ ಹೊಂದಿದ್ದ ರೈತರಿಗೆ ಮಾರುಕಟ್ಟೆಗೆ ಹೋಗುವ ಸಮಯದಲ್ಲಿ ಮರದಲ್ಲೇ ಮಾವಿನಕಾಯಿ ತೊಟ್ಟಿನ ಜಾಗದಲ್ಲಿ ಕಪ್ಪಾಗಿ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿದ್ದು, ಆರ್ಥಿಕ ನಷ್ಟದ ಭೀತಿ ತಂದೊಡ್ಡಿದೆ.


ಜಿಲ್ಲೆಯಲ್ಲಿ ಹೆಚ್ಚಾಗಿ ಬಾದಾಮಿ, ಸೇಂಧೂರ, ರಸಪೂರಿ ಮಾವಿನಕಾಯಿ ಬೆಳೆಯುತ್ತಾರೆ. ಪ್ರಸ್ತುತ ಬಾದಾಮಿ ಮಾವಿನ ಕಾಯಿಗಳಲ್ಲಿ ಹೆಚ್ಚಾಗಿ ಈ ತರಹದ ಲಕ್ಷಣ ಕಾಣುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಬಾದಾಮಿ ಮಾವು ಇತರ ಮಾವಿಗಿಂತ ರುಚಿಯಲ್ಲಿ ಮುಂದು ಜತೆಗೆ ಜಿಲ್ಲೆಯ ಬಾದಾಮಿ ಹಣ್ಣಿಗೆ ತುಸು ಬೇಡಿಕೆ ಹೆಚ್ಚಿದ್ದು, ಹೆಚ್ಚಿನ ಬೆಲೆ ಕೂಡ ಸಿಗುತ್ತದೆ.


ಆದರೆ, ಕೈಲಾಂಚ, ಕಸಬಾ, ಕೂಟಗಲ್ ಭಾಗಗಳ ಕೆಲವೊಂದು ಗ್ರಾಮಗಳ ರೈತರ ಮಾವಿನತೋಟಗಳಲ್ಲಿ ಇಂತಹ ಸಮಸ್ಯೆ ಕಂಡುಬಂದಿದೆ. ಹೆಚ್ಚಿನ ಬಿಸಿಲಿನ ಜತೆಗೆ ಜೋನಿ ಕೀಟಬಾಧೆಯಿಂದ ಮಾವಿನ ಕಾಯಿಗಳು ಕಪ್ಪಾಗಿ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿವೆ. ಇದರಿಂದ ಗುತ್ತಿಗೆ ಪಡೆದ ಮಾರಾಟಗಾರರಿಗೆ ರೈತರಿಗೆ ಆರ್ಥಿಕ ಚಿಂತೆ ಕಾಡುತ್ತಿದೆ. ಪ್ರತೀ ವರ್ಷ ಹೇಗೋ ಉತ್ತಮ ಫಸಲು ಕಂಡು ರೈತರು ಆದಾಯ ಜೇಬಿಗಿಳಿಸುತ್ತಿದ್ದರು.

ಆದರೆ, ಈ ಬಾರಿ ಮಳೆ ಕೊರತೆಯಾದ ಕಾರಣ ಸರಿಯಾದ ಸಮಯಕ್ಕೆ ಹೂ ಬಿಡದೆ ಪೀಚು ಕಚ್ಚದ ಪರಿಣಾಮ ಮಾವು ಫಸಲು ಕುಂಠಿತ ಕಂಡಿದೆ.
ಮಾವು ವಿಳಂಬವಾದರೂ ಒಂದಷ್ಟು ರೈತರ ತೋಟಗಳಲ್ಲಿ ಫಸಲು ವಿಳಂಬವಾಗಿ ಈಗಷ್ಟೇ ಕಾಯಿಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಇಂತಹ ಸಮಯದಲ್ಲಿ ಗಿಡದಲ್ಲೇ ಮಾವಿನಕಾಯಿಗಳು ಬಿಸಿಲ ಜಳಕ್ಕೆ ತುತ್ತಾಗಿ ಹಳದಿ ಬಣ್ಣಕ್ಕೆ ತಿರುಗಿ ಕಾಯಿಗಳು ಕಪ್ಪಾಗಿ ಉದುರುವುದು ರೈತರಲ್ಲಿ ನಿರಾಸೆ ಮೂಡಿಸಿದೆ.


ಜತೆಗೆ ವಾತಾವರಣ ಬದಲಾವಣೆಯಿಂದ ಒಂದೇ ಬಾರಿ ಹೂವು ಬಿಡುವ ಬದಲು ಮೂರ‌್ನಾಲ್ಕು ಬಾರಿ ಹೂವು ಕಚ್ಚಿದ ಪರಿಣಾಮ ಸರಿಯಾದ ಇಳುವರಿ ಸಿಗದೆ ಹೂವಿನಲ್ಲೇ ಪೀಚು ಪೀಚು ಕಾಯಿಗಳು ಉದುರಿ ಮಾವಿನ ಫಸಲು ಕಾಣಲಿಲ್ಲ. ಇದರ ಜತೆಗೆ ಮಳೆ ಕೊರತೆಯಿಂದ ಗಿಡಗಳಿಗೆ ನೀರಿನ ಕೊರತೆ ಉಂಟಾಗಿ ಜೋನಿ ರೋಗಬಾಧೆ ವಿಪರೀತವಾಗಿದೆ.

ಬಾರದ ಮಳೆ


ಪ್ರತೀ ವರ್ಷ ಮಾರ್ಚ್, ಏಪ್ರಿಲ್‌ನಲ್ಲಿ ಅಕಾಲಿಕವಾಗಿಯಾದರೂ ಮಳೆ ಸುರಿಯುತ್ತಿತ್ತು. ಇದರಿಂದ ಮಾವಿನಕಾಯಿಗಳಿಗೆ ಒಂದಷ್ಟು ವರದಾನವಾಗಿ ಕಾಯಿ ದಪ್ಪವಾಗಲು ಸಹಕಾರಿಯಾಗುತ್ತಿತ್ತು. ಆದರೆ, ಈ ಬಾರಿ ಅಕಾಲಿಕ ಮಳೆಯೂ ಇಲ್ಲ, ಇತ್ತ ಬಿಸಿಲಿನ ಜಳ ಹೆಚ್ಚಳದಿಂದ ಕಾಯಿಗಳು ದಪ್ಪವಾಗಲೂ ಇಲ್ಲ.

ಏರದ ಬೆಲೆ 


ಒಂದು ತಿಂಗಳಿಂದಲೂ ಮಾವು ಮಾರುಕಟ್ಟೆ ಹೋಗುತ್ತಿದೆ. ಮೊದಮೊದಲು ಏರಿಕೆಯಲ್ಲಿದ್ದ ಮಾವು ಪ್ರಸ್ತುತ ಇಳಿಕೆ ಕಂಡಿದೆ. ಸೇಂಧೂರ ಮಾವಿನಕಾಯಿಗೆ ವಾರದ ಹಿಂದೆ 45 ರಿಂದ 75 ರೂ. ದರವಿತ್ತು. ಪ್ರಸ್ತುತ 20 ರಿಂದ 40 ರೂ. ಗೆ ಇಳಿದಿದೆ. ರಸಪೂರಿ 60 ರಿಂದ 80 ಇದ್ದು, ಈಗ 45 ರಿಂದ 60ರೂ. ರಲ್ಲಿದೆ. ಬಾದಾಮಿ 80 ರಿಂದ 100 ಇದ್ದು, ಈಗ 45, 75ಕ್ಕೆ ಮಾರಾಟ ನಡೆಯುತ್ತಿದ್ದು, ಕುಸಿಯುತ್ತಿರುವ ಬೆಲೆಗೆ ರೈತ ಕಂಗಾಲಾಗುವಂತಾಗಿದೆ.

ಹೊರ ರಾಜ್ಯದ ಮಾರಾಟಗಾರರು ಇಲ್ಲ:

ಪ್ರತೀ ವರ್ಷ ರಾಮನಗರ, ಚನ್ನಪಟ್ಟಣ ಮಾವು ಮಾರುಕಟ್ಟೆಗೆ ಹೊರ ರಾಜ್ಯದ ವ್ಯಾಪಾರಿಗಳು ತುಂಬಿರುತ್ತಿದ್ದರು. ಆದರೆ, ಈ ಬಾರಿ ಮಾವು ಫಸಲು ಹೆಚ್ಚಾಗಿ ಇರದ ಕಾರಣ ಉತ್ತಮ ಇಳುವರಿ ಮಾವು ಇರದ ಕಾರಣ ಹೊರ ರಾಜ್ಯದ ಮಾರಾಟಗಾರರು ಮರುಕಟ್ಟೆಗಳತ್ತ ಸುಳಿದಿಲ್ಲ. ಸ್ಥಳೀಯವಾಗೆ ವರ್ತಕರು ರೈತರಿಂದ ಮಾವಿನಕಾಯಿ ಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಬೆಲೆಯಲ್ಲಿ ಏರಿಕೆ ಕಂಡು ಬಂದಿಲ್ಲ ಎನ್ನಲಾಗಿದೆ.


ಮಾವಿನ ಮರದಲ್ಲಿ ಬಿಟ್ಟ ಹೂವು ಜೋನಿ ರೋಗಕ್ಕೆ ತುತ್ತಾಗಿ ಪೀಚು ಕಚ್ಚಲಿಲ್ಲ. ಇದ್ದ ಕಾಯಿಗಳು ಬಿಸಿಲಿನ ಜಳಕ್ಕೆ ಬಾಡಿ ಬೆಂಡಾಗಿ ಉದುರುತ್ತಿವೆ. ತೊಟ್ಟಿನ ಭಾಗದಲ್ಲೇ ಕಾಯಿಗಳು ಕಪ್ಪಾಗಿ ಮರುಕಟ್ಟೆಗೆ ಹೋಗುವ ಸಮಯದಲ್ಲಿ ನೆಲಕಚ್ಚುತ್ತಿವೆ. ಇದ್ದ ಫಸಲಿನಲ್ಲೇ ಒಂದಷ್ಟು ಔಷಧಕ್ಕಾಗಿ ಖರ್ಚು ಮಾಡಿದ ಹಣ ಕೈಸೇರುತ್ತದೆ ಎಂದರೆ ಅದೂ ಕೂಡ ಸಿಗದೆ ನಿರಾಸೆ ತರುತ್ತಿದೆ.
ಸುರೇಶ್, ರೈತ, ಕೈಲಾಂಚ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net