ಮಾವಿಗೆ ಜಿಗಿಹುಳು, ನುಸಿರೋಗ ಬಾಧೆ

WhatsApp-Image-2024-03-29-at-10.59.55-PM
Published on

ರೋಗದಿಂದ ಉದುರುತ್ತಿರುವ ಹೂವು | ರೈತರಲ್ಲಿ ಆತಂಕ | ನಿರೀಕ್ಷಿತ ಫಸಲು ಅನುಮಾನ

| ಎನ್.ಮುನಿವೆಂಕಟೇಗೌಡ, ಕೋಲಾರ

ಉತ್ತಮ ಮಾವು ಫಸಲು ನಿರೀಕ್ಷೆಯಲ್ಲಿದ್ದ ರೈತರಿಗೆ ಜಿಗಿಹುಳು ಮತ್ತು ನುಸಿರೋಗದ ಕಾಟ ಹೆಚ್ಚಾಗಿದ್ದು, ಈ ಬಾರಿ ಶೇ. 30 ಫಸಲು ಕೈ ಸೇರುವುದು ಅನುಮಾನವಾಗಿದೆ. ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಮಾವು ಜಿಲ್ಲೆಯ ರೈತರಿಗೆ ಜೀವನಾಡಿ ಬೆಳೆಯಾಗಿದೆ. ಕಳೆದ ವರ್ಷ ಕೀಟಭಾದೆಯಿಂದಾಗಿ ಫಸಲು ಕಳೆದುಕೊಂಡಿದ್ದ ರೈತರು, ಈ ವರ್ಷ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿ ಜಿಲ್ಲೆಯಲ್ಲಿ ಎರಡ್ಮೂರು ವಾರ ತಡವಾಗಿ ಮರಗಳಲ್ಲಿ ಹೂವು ಕಾಣಿಸಿಕೊಂಡಿದೆ. ಹೂವು ಬಿಡುವ ಆರಂಭದಲ್ಲೇ ರೋಗ ರುಜಿನ ಕಾಣಿಸಿಕೊಳ್ಳಬಾರದು ಎಂದು ಔಷಧ ಸಿಂಪಡಿಸಿದರೂ ನುಸಿರೋಗ ಮತ್ತು ಜಿಗಿಹುಳ ಕಾಟದಿಂದ ಫಸಲನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ. ಜನವರಿಯಲ್ಲಿ ಬಿಟ್ಟ ಹೂವಿನಿಂದ ಫಸಲನ್ನು ನೋಡಬಹುದಾಗಿದೆ. ಆದರೆ, ಫೆಬ್ರವರಿಯಲ್ಲಿ ಕಾಣಿಸಿಕೊಂಡ ಹೂವಿಗೆ ನುಸಿರೋಗ ಮತ್ತು ಜಿಗಿಹುಳದ ಕಾಟ ಶುರುವಾಗಿದೆ. ಅಳಿದುಳಿದಂತೆ ಕಚ್ಚಿಕೊಂಡ ಕಾಯಿಗೆ ನುಸಿರೋಗ ತಗುಲಿ ಕಾಯಿಯಲ್ಲಿ ಮಚ್ಚೆಗಳಾಗಿ ಸಿಪ್ಪೆಯ ರಸ ಹೀರಿ ಕಾಯಿ ಬೆಂಡಾಗಿ, ಕ್ರಮೇಣ ಉದುರುತ್ತಿವೆ.

ಹಳದಿ ಬಣ್ಣಕ್ಕೆ ಕಾಯಿ: ಜಿಗಿಹುಳ ಕಾಟದಿಂದ ಜೋನು ಸೋರಿ ಕಾಯಿ ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ಬಂದು ಉದುರುತ್ತಿವೆ. ರೋಗ ಹತೋಟಿಗೆ ತರಲು ರೈತರು ಇದುವರೆಗೆ 5 ರಿಂದ 6 ಬಾರಿ ಔಷಧ ಸಿಂಪಡಣೆ ಮಾಡಿದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ನುಸಿರೋಗ ಮತ್ತು ಜಿಗಿಹುಳ ಕಾಟದಿಂದ ಪಾರಾಗಿ ಅಲ್ಪಸ್ವಲ್ಪ ಉಳಿದಿರುವ ಕಾಯಿಗಳಿಗೆ ಸಿಬ್ಬೆ ರೋಗ ಕಾಣಿಸಿಕೊಂಡು ಕಾಯಿ ಕೊಳೆಯುತ್ತಿವೆ. ಇದು ರೈತರನ್ನು ಆತಂಕಕ್ಕೀಡುಮಾಡಿದೆ. ಈಗಲೇ ಇಷ್ಟೊಂದು ರೋಗಗಳು ಕಾಣಿಸಿಕೊಂಡಿರುವಾಗ ಕಾಯಿ ಹಣ್ಣಾಗುವ ವೇಳೆಗೆ ಫಸಲು ನಮ್ಮ ಕೈ ಸೇರುತ್ತದೆಯೋ ಇಲ್ಲವೋ ಎಂಬ ಭಯ ರೈತರಲ್ಲಿ ಆವರಿಸಿದೆ.

ಬಿಸಿಲಿನ ತಾಪಮಾನ ಹೆಚ್ಚಳ: 

ಜಿಲ್ಲೆಯಲ್ಲಿ 10 ವರ್ಷಗಳಿಗಿಂತ ಈ ಬಾರಿ ಗರಿಷ್ಠ ಬಿಸಿಲಿನ ತಾಪಮಾನ ದಾಖಲಾಗಿದೆ. ಕೀಟ ಬಾಧೆ ರೋಗದ ಜತೆಗೆ ಬಿಸಿಲಿನ ತಾಪಮಾನದಿಂದಾಗಿಯೂ ಫಸಲು ಉದುರುವ ಭಯದಲ್ಲಿರುವ ರೈತರಿಗೆ ಇರುವ ಫಸಲನ್ನು ಉಳಿಸಿಕೊಳ್ಳಲು ಮರಗಳಿಗೆ ನೀರು ಸಿಂಪಡಣೆ ಮಾಡಲು ಮುಂದಾಗಿದ್ದಾರೆ. ನೀರಿಗೆ ಬರ ಇರುವುದರಿಂದ ಈ ವೇಳೆ ಮಳೆ ಸುರಿದರೆ ಫಸಲು ಉಳಿಸಿಕೊಳ್ಳಲು ಅನುಕೂಲವಾಗಬಹುದು ಎಂಬುದು ರೈತರ ಅನಿಸಿಕೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಶೀತ, ಉಷ್ಣಾಂಶ ಹೆಚ್ಚಾದ ಕಾರಣ ಹವಾಮಾನ ವೈಪರೀತ್ಯದಿಂದಾಗಿ ಕೀಟ ಬಾಧೆೆ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಫಸಲಿಗೆ ಧಕ್ಕೆ ಉಂಟಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯ.

ಮಾವಿಗೆ ನುಸಿರೋಗ ಮತ್ತು ಜಿಗಿಹುಳ ಕೀಟಬಾಧೆ ಕಾಡತೊಡಗಿದೆ. ಇದುವರೆಗೆ ಏಳು ಬಾರಿ ಔಷಧ ನಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬಂದಿಲ್ಲ. ಅಧಿಕಾರಿಗಳು ಮತ್ತು ವಿಜ್ಞಾನಿಗಳು ಕಚೇರಿ ಬಿಟ್ಟು ರೈತರ ತೋಟಗಳ ಕಡೆ ಮುಖ ಮಾಡುತ್ತಿಲ್ಲ. ಕೇಳಿದರೆ ಚುನಾವಣೆ ಕರ್ತವ್ಯದಲ್ಲಿದ್ದೇವೆ ಎನ್ನುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಶೇ.15 ಫಸಲು ನಿರೀಕ್ಷಿಸಲು ಅಸಾಧ್ಯ. ಈಗಾಗಲೇ ಔಷಧಗಳಿಗೆ ಹಾಕಿರುವ ಬಂಡವಾಳವನ್ನು ನಿರೀಕ್ಷಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ.

ಚಿನ್ನಪ್ಪರೆಡ್ಡಿ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ

ನುಸಿರೋಗ ಮತ್ತು ಕೀಟಬಾಧೆ ಹತೋಟಿಗೆ ಇಲಾಖೆಯಿಂದ ಯಾವ ಔಷಧ ಸಿಂಪಡಣೆ ಮಾಡಬೇಕು ಎಂಬುದರ ಬಗ್ಗೆ ಕರಪತ್ರದ ಮೂಲಕ ಮಾಹಿತಿ ಒದಗಿಸಲಾಗಿದೆ. 15 ದಿನಗಳಿಂದ ಚುನಾವಣೆ ಕರ್ತವ್ಯದಲ್ಲಿ ಇರುವುದರಿಂದ ರೈತರಿಂದ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ನಮ್ಮ ಇಲಾಖೆ ಅಧಿಕಾರಿಗಳನ್ನು ಕಳುಹಿಸಿಕೊಡುತ್ತೇವೆ. ರೈತರು ಇಲಾಖೆ ಮಾಹಿತಿ ಪಡೆದು ಸೂಕ್ತ ಔಷಧ ಸಿಂಪಡಣೆ ಮಾಡಬೇಕು - ಕುಮಾರಸ್ವಾಮಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ.

1. ನುಸಿರೋಗ ಮತ್ತು ಜಿಗಿ ಹುಳಕಾಟದಿಂದ ಕಾಯಿ ಹಳದಿ ಬಣ್ಣಕ್ಕೆ ತಿರುಗಿದೆ.

2. ನುಸಿರೋಗದಿಂದ ಹೂವು ಒಣಗಿದ್ದು, ಬಿಟ್ಟಿರುವ ಕಾಯಿಯು ಬೆಂಡಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net