ಮಾರುಕಟ್ಟೆಗೆ ಹಣ್ಣಿನ ರಾಜ ಮಾವು ಲಗ್ಗೆ

mango
Published on

* ಭರ್ಜರಿ ವ್ಯಾಪಾರ ಪ್ರಾರಂಭ

* ರಾಜ್ಯ, ಹೊರ ರಾಜ್ಯಗಳಲ್ಲಿ ಉತ್ತಮ ಬೇಡಿಕೆ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಜಿಲ್ಲೆಯ ಮಾರುಕಟ್ಟೆಗೆ ಹಣ್ಣಿನ ರಾಜ ಮಾವು ಲಗ್ಗೆ ಇಟ್ಟಿದ್ದು, ಭರ್ಜರಿ ವ್ಯಾಪಾರ ವಹಿವಾಟು ಪ್ರಾರಂಭವಾಗಿದೆ. ಪ್ರಸ್ತುತ ಪ್ರಾರಂಭದ ದರ ರೈತರಿಗೆ ಭರಪೂರ ಲಾಭದ ಆಸೆ ಚಿಗುರಿಸಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಬಾದಾಮಿ, ರಸಪೂರಿ, ಸೇಂದೂರ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಬಾದಾಮಿ, ರಸಪೂರಿ ಮಾವು ರುಚಿಯಲ್ಲಿ ಉತ್ತಮ ಸ್ಥಾನ ಪಡೆದಿದ್ದು, ರಾಜ್ಯ ಸೇರಿ ಹೊರ ರಾಜ್ಯಗಳಲ್ಲಿ ಜಿಲ್ಲೆಯ ಮಾವಿಗೆ ಉತ್ತಮ ಬೇಡಿಕೆ ಇದೆ.

ಪ್ರತಿ ವರ್ಷ ಕೋಲಾರ ಮಾರುಕಟ್ಟೆಗೂ ಮುಂಚೆಯೇ ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶಿಸುತ್ತದೆ. ಇದರಿಂದ ಜಿಲ್ಲೆಯ ಮಾವಿಗೆ ಬಹು ಬೇಡಿಕೆ ಇರುತ್ತದೆ. ಮಾರ್ಚ್ ಮೊದಲ ವಾರದಲ್ಲೇ ಜಿಲ್ಲೆಯಲ್ಲಿ ಮಾವು ವ್ಯಾಪಾರ ಮೇಳೈಸುತ್ತಿತ್ತು. ಆದರೆ, ಈ ಭಾರಿ ಮಾವು ಹೂವು ಬಿಡಲು ಒಂದು ತಿಂಗಳು ವಿಳಂಬವಾಗಿರುವ ಕಾರಣ ಏಪ್ರಿಲ್ ಪ್ರಾರಂಭದಲ್ಲಿ ಬಾದಾಮಿ, ಸೆಂದೂರ, ರಸಪೂರಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಏಳೆಂಟು ದಿನಗಳಲ್ಲಿ ಮತ್ತಷ್ಟು ಹೆಚ್ಚು ಮಾವು ಮಾರುಕಟ್ಟೆ ಪ್ರವೇಶಿಸಬಹುದು ಎನ್ನುತ್ತಾರೆ ವರ್ತಕರು. ರಾಮನಗರ ಮತ್ತು ಚನ್ನಪಟ್ಟಣ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದೊಂದೇ ಮಾವು ಮಂಡಿಗಳು ಬಾಗಿಲು ತೆರೆಯುತ್ತಿದ್ದು, ಮಾವು ದರ್ಬಾರ್ ಶುರುವಾಗತೊಡಗಿದೆ.

ಹೊರ ರಾಜ್ಯಕ್ಕೆ ಜಿಲ್ಲೆಯ ಮಾವು

ಮಂಡಿ ವರ್ತಕರು ರೈತರಿಂದ ಮಾವು ಖರೀದಿಸಿ ಮಹಾರಾಷ್ಟ್ರ, ದೆಹಲಿ, ಬಾಂಬೆ, ಹರಿಯಾಣ, ಬೆಂಗಳೂರು ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ. ಜತೆಗೆ ಮಾವು ಉತ್ಪನ್ನ, ತಂಪು ಪಾನೀಯ ಕಾರ್ಖಾನೆಗಳಿಗೆ ಜಿಲ್ಲೆಯ ಮಾವು ಸರಬರಾಜಾಗುತ್ತದೆ.

ಬಾದಾಮಿಗೆ ಬೇಡಿಕೆ

ಜಿಲ್ಲೆಯ ಬಾದಾಮಿ ಮಾವಿಗೆ ಬಹು ಬೇಡಿಕೆ ಇದೆ. ಆ ಕಾರಣಕ್ಕೆ ಪ್ರಾರಂಭಿಕವಾಗಿ ಬಾದಾಮಿಗೆ ಹೆಚ್ಚಿನ ಬೆಲೆಯೂ ಸಿಗುತ್ತದೆ. ಈಗ ಅತ್ಯಲ್ಪ ಮಾವು ಮಾರುಕಟ್ಟೆಗೆ ಬರುತ್ತಿದೆ. ರೈತರಿಗೆ ವರ್ತಕರಿಗೆ ಇಬ್ಬರಿಗೂ ಬಾದಾಮಿ ಸಲು ಲಾಭ ತಂದುಕೊಡುತ್ತಿದೆ. ಹೆಚ್ಚಿನ ಸಲು ಬಂದರೆ ಹೊರ ರಾಜ್ಯದ ವ್ಯಾಪಾರಿಗಳು ಬಂದು ಮತ್ತಷ್ಟು ಲಾ‘ ಕಾಣಬಹುದು ಎನ್ನುತ್ತಾರೆ ಮಂಡಿ ವರ್ತಕ ಅಸ್ಲಂಪಾಷ.

ಲಾಭದಾಯಕ ಸೆಂದೂರ

ಜಿಲ್ಲೆಯಲ್ಲಿ ಹೆಚ್ಚಾಗಿ ಸೆಂದೂರ ಮಾವು ಮಾರುಕಟ್ಟೆಗೆ ಬರುತ್ತದೆ. ಕೀಟಬಾದೆ, ವಾತಾವರಣ ಬದಲಾವಣೆ ಇದ್ದರೂ ರೈತನ ಕೈಹಿಡಿಯವುದು ಸೆಂದೂರ ಮಾವು. ಪ್ರತೀ ವರ್ಷ ಮಾರುಕಟ್ಟೆಯಲ್ಲಿ 15-20 ರೂ. ದರವಿರುತ್ತದೆ. ಪ್ರಸ್ತುತ ಇಂದು 100 ರೂ. ಗಡಿ ದಾಟಿದೆ. ಇದೇ ದರ ಮುಂದೆಯೂ ಸಿಕ್ಕರೆ ರೈತರು ಮತ್ತು ದಲ್ಲಾಳಿಗಳಿಗೆ ಜೇನು ಸವಿದಷ್ಟೇ ಸಂತಸವಾಗಲಿದೆ.

ಪ್ರಸ್ತುತ ದರ

ಪ್ರಸ್ತುತ ಮಾರುಕಟ್ಟೆಯಲ್ಲಿ ಸೆಂದೂರ 70 ರಿಂದ 102 ರೂ., ಬಾದಾಮಿ 120 ರಿಂದ 140 ರೂ., ರಸಪೂರಿ 100 ರಿಂದ 130 ರೂ., ತೋತಾಪುರಿ 15 ರಿಂದ 26 ರೂ. ವರೆಗೆ ಮಾರಾಟವಾಗುತ್ತಿದೆ. ಕಳೆದ ಎರಡು ದಿನಗಳಿಂದಲೂ ಬೆಲೆಯಲ್ಲಿ 1 ರೂ. 2, 3 ರೂ. ವ್ಯತ್ಯಾಸದಲ್ಲಿ ನಡೆಯುತ್ತಿದೆ. ಹೊರ ರಾಜ್ಯದ ವ್ಯಾಪಾರಿಗಳು ಮಾರುಕಟ್ಟೆ ಪ್ರವೇಶಿಸಿದರೆ ಹೆಚ್ಚಿನ ದರವೂ ಸಿಗಬಹುದು ಎನ್ನುತ್ತಾರೆ ಮಂಡಿ ವರ್ತಕರು.

ಕಳೆದ ವರ್ಷ 1,85,640 ಮೆಟ್ರಿಕ್ ಟನ್ ಮಾವು ಜಿಲ್ಲೆಯ ಮಾರುಕಟ್ಟೆ ಪ್ರವೇಶಿಸಿತ್ತು. ಪ್ರಸ್ತುತ ಸಾಲಿನಲ್ಲಿ 2,46,785 ಮೆಟ್ರಿಕ್ ಟನ್ ಮಾವು ಸಲು ಗುರಿ ಹೊಂದಲಾಗಿತ್ತು. ವಾತಾವರಣದ ಬದಲಾವಣೆ, ಹೂವು ವಿಳಂಬ ಮತ್ತಿತರ ಕಾರಣಗಳಿಂದ ಈ ಸಾಲಿನಲ್ಲಿ 1,90,151 ಮೆಟ್ರಿಕ್ ಟನ್ ಮಾವು ಸಲು ಉತ್ಪಾದನೆ ಗುರಿ ಹೊಂದಲಾಗಿದೆ. ಎಂ.ಎಸ್. ರಾಜು, ತೋಟಗಾರಿಕೆ ಇಲಾಖೆ ಜಿಲ್ಲಾ ನಿರ್ದೇಶಕರು, ರಾಮನಗರಹೂವು ವಿಳಂಬ, ಬಿಸಿಲ ಝಳ, ಜೋನಿ ಹೊಡೆತದಿಂದ ನಮ್ಮ ನಿರೀಕ್ಷೆಯಷ್ಟು ಸಲು ಸಿಕ್ಕಿಲ್ಲ. ಸೆಂದೂರ, ಬಾದಾಮಿ ಪ್ರಥಮವಾಗಿ ಕೊಯ್ಲಿಗೆ ಬಂದಿದೆ. ಪ್ರಸ್ತುತ ದರ ಉತ್ತಮವಾಗಿದೆ. ಇದೇ ರೀತಿ ಮುಂದೆ ದರದಲ್ಲಿ ಏರಿಳಿತ ಕಾಣದಿದ್ದರೆ ರೈತರಿಗೆ ನಷ್ಟದ ಭೀತಿ ಎದುರಾಗುವುದಿಲ್ಲ. ಡೈರಿ ಪ್ರಕಾಶ್, ಮಾವು ಬೆಳೆಗಾರ ರೈತ, ಕುರುಬಳ್ಳಿದೊಡ್ಡಿ332ಹೊರ ರಾಜ್ಯಕ್ಕೆ ಕಳಿಸುವಷ್ಟು ಆವಕ ಮಾರುಕಟ್ಟೆಗೆ ಲಗ್ಗೆ ಇಟ್ಟಿಲ್ಲ. ಬಾಂಬೆ, ದೆಹಲಿ ಮುಂತಾದ ಕಡೆ ಮಾವು ಕಳಿಸಲಾಗುತ್ತದೆ. ಸಲು ವಿಳಂಬವಾಗಿರುವ ಕಾರಣ ತಿಂಗಳ ನಂತರ ಮಂಡಿ ಪ್ರಾರಂಭಿಸಲಾಗಿದೆ. ಹೆಚ್ಚಿನ ಮಾವು ಕಾಣುತ್ತಿಲ್ಲ. ಮಾರುಕಟ್ಟೆಗೆ ಬಂದ ಕಾಯಿಗಳಿಗೆ ಉತ್ತಮ ದರ ಸಿಗುತ್ತಿದೆ. ಮುಂದೆ ಆವಕ ಹೆಚ್ಚಾದರೆ ದರದಲ್ಲಿ ವ್ಯತ್ಯಾಸ ಕಾಣಬಹುದು. ಅಬ್ದುಲ್ ರಜಾಕ್, ಎನ್.ಎ.ಆರ್. ಮಾವಿನಕಾಯಿ ಮಂಡಿ ವರ್ತಕ, ರಾಮನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net