

ವಿಜಯುವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದಿನದಿಂದ ದಿನಕ್ಕೆ ರಂಗೇರುತ್ತಿರುವ ಬಿಸಿಲು ಜಿಲ್ಲೆಯ ಮಾವು ಬೆಳೆಗಾರರನ್ನು ಕಂಗಾಲಾಗಿಸಿದೆ. ಬಿಸಿಲ ತಾಪಕ್ಕೆ ಮರಗಳಿಂದ ಮಾವಿನ ಕಾಯಿಗಳು ನೆಲಕಚ್ಚುತ್ತಿದ್ದು ಭಾರಿ ಪ್ರಮಾಣದಲ್ಲಿ ಇಳುವರಿಗೆ ಪೆಟ್ಟು ಬೀಳಲಿದೆ ಎಂಬ ಆತಂಕ ಎದುರಾಗಿದೆ.
ಕಳೆದ ಹಲವು ವರ್ಷಗಳಿಂದಲೂ ಪ್ರಕೃತಿಯ ಕಣ್ಣಾಮುಚ್ಚಾಲೆ ಆಟಕ್ಕೆ ನಲುಗಿರುವ ಜಿಲ್ಲೆಯ ಮಾವು ಬೆಳೆಗಾರರು, ಈ ಬಾರಿಯೂ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾವು ಬೆಳೆಗಾರರೊಂದಿಗೆ ಮಧ್ಯವರ್ತಿಗಳೂ ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಇಳುವರಿ ಕುಸಿಯುತ್ತಿರುವ ಕಾರಣದಿಂದ ಮಾವಿನದ ದರ ಗಗನಮುಖಿಯಾಗಲಿದ್ದು ಗ್ರಾಹಕರ ಜೇಬಿಗೂ ಮಾವು ಭಾರವಾಗಲಿದೆ.
ಉದುರುತ್ತಿವೆ ಮಾವಿನ ಕಾಯಿಗಳು: ದಶಕಗಳ ಕಾಲ ನೀಲಗಿರಿಮಯವಾಗಿದ್ದ ಜಿಲ್ಲೆಯಲ್ಲಿ ಕಳೆದ 10 ವರ್ಷದಿಂದೀಚೆಗೆ ನೀಲಗಿರಿ ತೆರವು ಅಭಿಯಾನದಿಂದಾಗಿ ನೂರಾರು ಎಕರೆ ನೀಲಗಿರಿ ಪ್ರದೇಶಗಳು ತೋಟಗಳಾಗಿ ಪರಿವರ್ತನೆಯಾಗಿವೆ. ಇದರಲ್ಲಿ ಬಹುತೇಕ ಜಮೀನುಗಳು ಮಾವಿನ ತೋಟಗಳಾಗಿ ರೂಪು ಪಡೆದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾವು ಬೆಳೆಯೂ ಪ್ರವರ್ಧಮಾನಕ್ಕೆ ಬರುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹೊಸಕೋಟೆ ತಾಲೂಕಿನಲ್ಲಿ 2066 ಹೆಕ್ಟೇರ್, ನೆಲಮಂಗಲ 1399 ಹೆಕ್ಟೇರ್, ದೊಡ್ಡಬಳ್ಳಾಪುರ 1038 ಹೆಕ್ಟೇರ್ ಹಾಗೂ ದೇವನಹಳ್ಳಿಯಲ್ಲಿ 729 ಹೆಕ್ಟೇರ್ ಸೇರಿ ಜಿಲ್ಲೆಯಲ್ಲಿ 5233 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ಬಾರಿ ಮುಂಗಾರು ಸರಿಯಾಗಿ ಆಗದ ಕಾರಣ ಕಚ್ಚಿದ್ದ ಹೂವುಗಳು ಮಳೆ ಕೊರತೆ ಹಾಗೂ ಹವಾಮಾನ ವೈಫರೀತ್ಯಕ್ಕೆ ನೆಲ ಕಚ್ಚಿಲಾರಂಭಿಸಿದ್ದು ಇಳವರಿಯಲ್ಲಿ ಹೊಡೆತ ಕಂಡುಬರುತ್ತಿದೆ.ಇರುವ ಅಷ್ಟೋ ಇಷ್ಟು ಮಾವು ಕೈ ಬರುತ್ತದೆ ಎಂದುಕೊಂಡಿದ್ದ ಬೆಳೆಗಾರರು ಈಗ ಏರುತ್ತಿರುವ ಬಿಸಿಲಿಗೆ ಕಾಯಿ ಉದುರಲು ಆರಂಭಿಸುವ ಕಾರಣ ನಿರೀಕ್ಷೆಯೂ ಕಮರುತ್ತಿದೆ.
ಮಾರುಕಟ್ಟೆಲ್ಲಿ ಮಾವಿಲ್ಲ: ಜಿಲ್ಲೆಯಿಂದ ಬಾದಾಮಿ, ಸೇಂದೂರಾ, ರಸಪುರಿ, ಬೈಗಂಪಲ್ಲಿ ಜಾತಿಯ ಹಣ್ಣುಗಳು ಮಾರ್ಚ್ ಆರಂಭದಲ್ಲಿಯೇ ಮಾರುಕಟ್ಟೆ ಪ್ರವೇಶ ಮಾಡಿ, ಪಲ್ಪ್ ಕಾರ್ಖಾನೆಗಳಿಗೆ ರವಾನೆ ಆಗುತ್ತವೆ. ಆದರೆ, ಈ ಸಲ ಅಷ್ಟಾಗಿ ಮಾವಿನ ಅಬ್ಬರವಿಲ್ಲ. ಸ್ವಲ್ಪ ಪ್ರಮಾಣದ ಬೆಳೆಯಷ್ಟೇ ಮಾರುಕಟ್ಟೆಗೆ ಬಂದಿದೆ. ಸಾಮಾನ್ಯವಾಗಿ ನವೆಂಬರ್ - ಡಿಸೆಂಬರ್‌ನಲ್ಲಿ ಮಾವು ಹೂ ಕಚ್ಚಿ, ಕಾಯಾಗಿ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುತ್ತವೆ. ಹವಾಮಾನ ವೈಫರೀತ್ಯ ಹಾಗೂ ಮಳೆ ಕೊರತೆ ಕಾರಣ ಈ ಸಲ ತಡವಾಗಿದೆ.
ಕೀಟಬಾಧೆ: ಇರುವ ಕಾಯಿಗೂ ಜಿಗಿ ಹುಳು, ವೈಟ್ ಫ್ಲೈಸ್, ಜೋನಿ, ನುಸಿ ಕೀಟಬಾಧೆ ಹಾಗೂ ಬೂದು ರೋಗ ಕಾಣಿಸಿಕೊಳ್ಳಲಾರಂಭಿಸಿದ್ದು ರೋಗ ಮತ್ತು ಕೀಟ ನಿಯಂತ್ರಣಕ್ಕೆ ಇಲಾಖೆಯು ಬೆಳೆಗಾರರಿಗೆ ಸಲಹೆಸೂಚನೆ ನೀಡುತ್ತಾ ಬಂದಿದೆಯಾದರೂ,ನಿರೀಕ್ಷೆಯಷ್ಟು ಸಲತೆ ಕಂಡುಬರುತ್ತಿಲ್ಲ.
ಗ್ರಾಹಕರಿಗೂ ಹೊರೆ: ಸಾಮಾನ್ಯವಾಗಿ ಇಳುವರಿ ಕುಸಿತದ ಸಂದರ್ಭದಲ್ಲಿ ಮಾವಿಗೆ ಹೆಚ್ಚಿನ ಬೆಲೆ ಇರುತ್ತದೆ. ಹಿಂದಿನ ವರ್ಷಗಳಲ್ಲಿ ಬಾದಾಮಿ ಪ್ರತಿ ಕೆಜಿ ಯನ್ನು 150-180 ರೂವರೆಗೂ ಖರೀದಿ ಮಾಡಿದ ಉದಾಹರಣೆಗಳು ಇವೆ. ಆದರೆ ಈ ಬಾರಿ ಇಳುವರಿ ಕುಸಿತ ಕಂಡಿದ್ದರೂ ಮಾರುಕಟ್ಟೆಯಲ್ಲಿ ಬಾದಾಮಿ ಬೆಲೆ ಪ್ರತಿ ಕೆಜಿಗೆ 60-90 ರೂ, ಸೇಂದುರಾ 25-45 ರೂ, ರಸಪೂರಿ 40-65 ರೂ ಹಾಗೂ ಬೈಂಗಪಲ್ಲಿ 40-60 ರೂ ಖರೀದಿ ಮಾಡಲಾಗುತ್ತಿದೆ. ಅಲ್ಲದೆ, ಕಾಯಿಗಳು ಉದುರಿ ಹೋಗುತ್ತವೆ ಎನ್ನುವ ಕಾರಣಕ್ಕೆ ರೈತರು ಗುಣಮಟ್ಟವನ್ನು ಕಾಪಾಡದೇ ಮಾರುಕಟ್ಟೆಗೆ ಮಾವು ತರುತ್ತಿರುವುದು ಸಹ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳುವರಿ ಕುಸಿತವಾಗುವ ಸಾಧ್ಯತೆ ಇದ್ದು, ಇದು ಗ್ರಾಹಕರಿಗೆ ಹೊರೆಯಾಗಲಿದೆ.
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಗ್ರಾಮಾಂತರ ಭಾಗದಲ್ಲಿ ಸಲಿಗೆ ಅಂಥ ಹೊಡೆತ ಬಿದ್ದಿಲ್ಲ. ಆದರೂ ದಿನೆ ದಿನೇ ಏರುತ್ತಿರುವ ಬಿಸಿಲ ತಾಪಕ್ಕೆ ಮಾವಿನ ಕಾಯಿಗಳು ಉದುರಿ ಬೀಳುವುದರಿಂದ ಮಾವು ಬೆಳೆಗಾರರು ಆತಂಕಗೊಂಡಿದ್ದಾರೆ. ಈ ಬಾರಿ ಮಳೆಯ ಕೊರತೆ ಹಾಗೂ ಬಿಸಿಲ ಬೇಗೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವೂ ಬಿಟ್ಟಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಲಿಗೆ ಹೊಡೆತ ಬೀಳಲಿದೆ.
ಗುಣವಂತ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಬೆಂ.ಗ್ರಾಮಾಂತರ
ಈ ಬಾರಿಯೂ ಹವಾಮಾಣ ವೈಫರೀತ್ಯ ಮತ್ತು ಮಳೆಯ ಕೊರತೆ ಕಾರಣಕ್ಕೆ ಮಾವಿನ ಫಸಲಿನ ಇಳುವರಿ ಕುಂಠಿತವಾಗಿದೆ. ಈ ಹಿಂದೆ ನೀಲಗಿರಿ ತೋಪನ್ನು ತೆರವುಗೊಳಿಸಿ ಮಾವಿನ ತೋಟ ಮಾಡಲಾಯಿತು. ಕಳೆದೆರಡು ವರ್ಷದಿಂದ ನಿರೀಕ್ಷಿತ ಇಳುವರಿ ಸಿಕ್ಕಿಲ್ಲ. ಈ ಬಾರಿ ಮತ್ತಷ್ಟು ನಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಗಂಗಾಧರ, ಮಾವು ಬೆಳೆಗಾರ ಪೂಜೇನಹಳ್ಳಿ