

ಮಡಿಕೇರಿ:
ಕಾಫಿ ನಾಡು ಕೊಡಗಿನ ಮಡಿಕೇರಿಯಲ್ಲಿ ಶುಕ್ರವಾರದಿಂದ (ಮೇ ೨೬) ಆರಂಭವಾಗಿರುವ ಮಾವು ಮತ್ತು ಹಲಸು ಮೇಳ ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರನ್ನೂ ಸೆಳೆಯುತ್ತಿದೆ. ಸುಮಾರು ೧೮ ಬಗೆಯ ಮಾವು, ನಾಲ್ಕಕ್ಕೂ ಹೆಚ್ಚು ತಳಿಯ ಹಲಸು ಹಾಗೂ ಇವೆರಡು ಹಣ್ಣುಗಳ ಉಪ ಉತ್ಪನ್ನಗಳು, ಗಿಡಗಳು ಇನ್ನೂ ೨ ದಿನ ಗ್ರಾಹಕರಿಗೆ ಒಂದೇ ಸೂರಿನ ಕೆಳಗೆ ಸಿಗುತ್ತದೆ. ಸ್ಥಳದಲ್ಲೇ ಸ್ವಾದ ಸವಿಯುವದರ ಜತೆಗೆ ರಾಸಾಯನಿಕ ಮುಕ್ತ ಖಾತರಿಯ ಹಣ್ಣುಗಳನ್ನು ಇಲ್ಲಿ ಖರೀದಿಸಬಹುದಾಗಿದೆ.
ಮಡಿಕೇರಿ ಹಾಪ್‌ಕಾಮ್ಸ್ ಆವರಣದ ಸುತ್ತಲೂ ಈಗ ಮಾವು ಮತ್ತು ಹಲಸಿನ ಪರಿಮಳ ಘಮಘಮಿಸುತ್ತಿದೆ. ಕಳೆದ ವರ್ಷದ ಯಶಸ್ಸಿನಿಂದ ಇದೀಗ ಇಲ್ಲಿ ೨ನೇ ಬಾರಿಗೆ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗಿದೆ. ಸೀಮಿತ ಋತುವಿನಲ್ಲಿ ಸಿಗುವ ಮಾವು ಮತ್ತು ಹಲಸಿನ ವಿವಿಧ ತಳಿಗಳನ್ನು ಗ್ರಾಹಕರಿಗೆ ಪರಿಚಯಿಸುವುದರ ಜತೆಗೆ ಉತ್ತಮ ಗುಣಮಟ್ಟದ ಮಾವು ಮತ್ತು ಹಲಸನ್ನು ಗ್ರಾಹಕರಿಗೆ ಕೊಳ್ಳಲು ಅವಕಾಶ ಮಾಡುವ ಪ್ರಮುಖ ಉದ್ದೇಶದಿಂದ ಆಯೋಜಿಸಲಾಗಿರುವ ಮೇಳದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸುವ ಬೆಳೆಗಾರರಿಗೂ ನಷ್ಟವಾಗದೆ, ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ದರ ನಿಗದಿ ಮಾಡಲಾಗಿದೆ.
ನೈಸರ್ಗಿಕವಾಗಿ ಹಣ್ಣು ಮಾಡಿದ ಹಲಸು ಮತ್ತು ಮಾವನ್ನು ಮಾತ್ರ ಈ ಮೇಳದಲ್ಲಿ ಮಾರಾಟಕ್ಕೆ ಇಡಲಾಗಿದೆ. ರಾಮನಗರ ಜಿಲ್ಲೆಯ ಮಾವು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಮಳಿಗೆ ತೆರೆದಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಜಿಲ್ಲೆಯ ಮಾವು ಬೆಳೆಗಾರರೂ ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿರುವ ಹಲಸು ಬೆಳೆಗಾರರು ಮತ್ತು ಹಲಸಿನ ಹಣ್ಣಿನ ಉಪ ಉತ್ಪನ್ನಗಳ ತಯಾರಕರ ಮಳಿಗೆಗಳು ಕೂಡ ಈ ಮೇಳದಲ್ಲಿದೆ. ವಿವಿಧ ತಳಿಯ ಮಾವು ಮತ್ತು ಹಲಸಿನ ಗಿಡಗಳನ್ನೂ ಮಾರಾಟ ಮಾಡಲಾಗುತ್ತಿದೆ.
ಶುಕ್ರವಾರ ಮಡಿಕೇರಿ ಸಂತೆ ದಿನವಾದ ಕಾರಣ ಸ್ಥಳೀಯರು ಮತ್ತು ಸುತ್ತಮುತ್ತಲಿನ ಊರುಗಳಿಂದ ಆಗಮಿಸಿದ್ದವರು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಒಂದಕ್ಕಿಂತ ಒಂದು ವಿಭಿನ್ನ ತಳಿಯ ಮಾವುಗಳನ್ನು ಮಳಿಗೆಗಳಲ್ಲಿ ನೋಡಿ ಇವುಗಳ ಬಗ್ಗೆ ಆಸಕ್ತಿಯಿಂದ ವಿಚಾರಿಸುವುದು ಸಾಮಾನ್ಯವಾಗಿತ್ತು. ಕೆಲವರು ಬೆಳೆಗಾರರ ಬಳಿ ಮಾವಿನ ಹಣ್ಣು ಪಡೆದುಕೊಂಡು ರುಚಿ ನೋಡಿದ ನಂತರ ಇಷ್ಟವಾದಲ್ಲಿ ಮಾತ್ರ ಮಾವು ಖರೀಸುತ್ತಿದ್ದರು. ಗಿಡದ ಲಭ್ಯತೆ ಬಗ್ಗೆಯೂ ಬೆಳೆಗಾರರನ್ನು ಪ್ರಶ್ನಿಸಿ ಕುತೂಹಲ ತಣಿಸಿಕೊಳ್ಳುತ್ತಿದ್ದರು. ಕೆ.ಜಿ.ಗೆ ೫೦ ರೂ.ನಿಂದ ೨೫೦ ರೂ. ತನಕದ ಮಾವಿನ ಹಣ್ಣುಗಳು ಇಲ್ಲಿ ಸಿಗುತ್ತಿದೆ. ಬುದ್ಧಿವಂತರು ಚಿಕ್ಕಪುಟ್ಟ ಚೌಕಾಸಿ ಮಾಡಿ ಇದಕ್ಕಿಂತಲೂ ಕಡಿಮೆ ಬೆಲೆಗೂ ಹಣ್ಣುಗಳ ಖರೀದಿ ಪ್ರಯತ್ನ ನಡೆಸಿದರು.
ದಕ್ಷಿಣ ಕನ್ನಡದಿಂದ ಆಗಮಿಸಿರುವ ಹಲಸು ಬೆಳೆಗಾರರು ವಿವಿಧ ತಳಿಯ ಹಲಸಿನ ಹಣ್ಣುಗಳ ಮಾರಾಟವನ್ನೂ ನಡೆಸುತ್ತಿದ್ದಾರೆ. ಹಲಸಿನ ಹಣ್ಣಿನ ಗಿಡಗಳೂ ಇಲ್ಲಿ ಸಿಗುತ್ತಿದೆ. ಪ್ರವಾಸಿ ಸೀಸನ್ ಆಗಿರುವ ಈ ಅವಧಿಯಲ್ಲಿ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ವಾರಾಂತ್ಯ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಮಡಿಕೇರಿಯತ್ತ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಶನಿವಾರ, ಭಾನುವಾರ ಈ ಸಂಖ್ಯೆ ಮತ್ತಷ್ಟು ಅಧಿಕವಾಗಲಿದ್ದು, ಮಾವು ಮತ್ತು ಹಲಸಿನ ಮೇಳವೂ ಪ್ರವಾಸಿಗರ ಆಕರ್ಷಣೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬಂಟ್ವಾಳ ತಾಲೂಕು ವಿಟ್ಲದ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ಮಳಿಗೆ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಇಲ್ಲಿ ಹಲಸಿನ ಹಣ್ಣಿನ ಉಪ ಉತ್ಪನ್ನಗಳ ಮಾರಾಟ ನಡೆಯುತ್ತಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ. ಹಲಸಿನ ಹಣ್ಣಿನ ಹಪ್ಪಳ, ಜಾಕ್ ಬಾರ್, ಹಲಸಿನ ಹಣ್ಣಿನ ಹಲ್ವಾ, ಸಾಂಬಾರ್‌ಗೆ ಬಳಸಬಹುದಾದ ಹಲಸಿನ ಕಾಯಿಯ ಸಂಸ್ಕರಿತ ಸೋಳೆ, ಹಲಸಿನ ಹಣ್ಣಿನ ಫಿಂಗರ್ ಚಿಪ್ಸ್, ಹಲಸಿನ ಉಂಡೆ, ಅಡಕೆಯ ಚಾಕ್ಲೆಟ್ ಹೀಗೆ ವೈವಿಧ್ಯಮಯ ಉತ್ಪನ್ನಗಳನ್ನು ಈ ಮಳಿಗೆಯಲ್ಲಿ ಕಾಣಬಹುದು. ದಕ್ಷಿಣಕನ್ನಡದವರೇ ತಯಾರಿಸಿದ ಹಲಸಿನ ಬೀಜದ ಚಪಾತಿ ಪುಡಿ, ಹಲಸಿನ ಬೀಜದ ಕುಕ್ಕೀಸ್, ಎನರ್ಜಿ ಡ್ರಿಂಕ್ ಪುಡಿ, ಹಲಸಿನ ಬೀಜದ ಹಪ್ಪಳವೂ ಮತ್ತೊಂದು ಮಳಿಗೆಯಲ್ಲಿ ಸಿಗುತ್ತಿದೆ.
೧೮ ಬಗೆಯ ಮಾವಿನ ಹಣ್ಣು ಈ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ. ಮಲ್ಗೋವಾ, ಆಲ್ಫೋನ್ಸೋ, ರಸ್‌ಪುರಿ, ಮಲ್ಲಿಕಾ, ಸಿಂಧೂರಿ, ಬಾಗೆಪಲ್ಲಿ, ತೋತಾಪುರಿ, ಕೇಸರ್, ಸುಗರ್ ಬೇಬಿ, ಕಲಪಾಡಿ, ಆಮ್ರಪಾಲಿ, ದಶೇರಿ, ಇಮಾಮ್ ಪಸಂದ್, ನೀಲಮ್, ಕೋಲ್ಕೊತ್ತಾ ಗೋಲ್ಡ್, ವಲಜಾ, ರೋಮಾನಿ, ಕರ್‌ಸಿರಿ ಹೀಗೆ ಒಂದೊಂದು ೨೦೦ ಗ್ರಾಂನಿಂದ ೧ ಕೆಜಿಗೂ ಅಧಿಕ ತೂಕದ ಮಾವಿನ ಹಣ್ಣುಗಳನ್ನು ಈ ಮೇಳದಲ್ಲಿ ನೋಡಬಹುದು ಮತ್ತು ಖರೀದಿಸಬಹುದು.
ನಮ್ಮ ತೋಟದ ಹಣ್ಣುಗಳನ್ನು ಇಲ್ಲಿ ಮಾರಾಟಕ್ಕೆ ತರಲಾಗಿದೆ. ಹಣ್ಣು ಮಾಡಲು ಯಾವುದೇ ರಾಸಾಯನಿಕ ಬಳಸಿಲ್ಲ. ನೈಸರ್ಗಿಕವಾಗಿ ಮಾಗಿದ ಹಣ್ಣುಗಳನಷ್ಟೇ ಇಲ್ಲಿ ಗ್ರಾಹಕರಿಗೆ ಕೊಡುತ್ತೇವೆ. ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೆಚ್ಚು ಹಣ್ಣು ಮಾರಾಟದ ನಿರೀಕ್ಷೆಯಲ್ಲಿ ಇದ್ದೇವೆ.
ರಾಮಚಂದ್ರ, ಮಾವು ಬೆಳೆಗಾರ, ರಾಮನಗರ
ಹಲಸು ಸೀಮಿತ ಋತುಗಳಲ್ಲಿ ಮಾತ್ರ ಸಿಗುವ ಹಣ್ಣು. ಇದನ್ನು ಸಂಸ್ಕರಿಸಿ ಉಪ ಉತ್ಪನ್ನಗಳನ್ನು ಮಾಡಿದರೆ ವರ್ಷದ ಎಲ್ಲಾ ಸಮಯದಲ್ಲೂ ಬಳಸಬಹುದು. ರೈತರಿಗೂ ಇದರಿಂದ ಒಳ್ಳೆಯ ಆದಾಯ ಸಿಗುತ್ತದೆ. ಹಾಗಾಗಿ ನಮ್ಮ ಸಂಸ್ಥೆ ಹಣ್ಣಿನ ಸಂಸ್ಕರಿತ ಉತ್ಪನ್ನಗಳತ್ತ ಹೆಚ್ಚು ಗಮನಹರಿಸಿದೆ.
ನಾರಾಯಣ, ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ಸಿಬ್ಬಂದಿ
ಒಂದೇ ಸ್ಥಳದಲ್ಲಿ ಇಷ್ಟೊಂದು ತಳಿಯ ಮಾವಿನ ಹಣ್ಣುಗಳನ್ನು ನೋಡಲು ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಒಂದಕ್ಕಿಂದ ಒಂದು ತುಂಬಾ ಚೆನ್ನಾಗಿದೆ. ಯಾವುದನ್ನು ಖರೀದಿ ಮಾಡುವುದು ಎನ್ನುವ ಗೊಂದಲ ಇಲ್ಲಿ ಬಂದರೆ ಕಾಡುತ್ತದೆ. ಒಳ್ಳೆಯ ಬೆಲೆಯಲ್ಲಿ ಗುಣಮಟ್ಟದ ಮಾವು ಖರೀದಿಸಲು ಗ್ರಾಹಕರಿಗೆ ಉತ್ತಮ ಅವಕಾಶ ಸಿಕ್ಕಿದೆ.
ಛಾಯಾ, ಗ್ರಾಹಕಿ