

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿಯಲ್ಲಿ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯ ವಿವಿಧ ಹಣ್ಣುಗಳ ಬೆಳೆಗಾರರು ಸೇರಿ ನೆರೆಯ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗದ ಮಾವು ಬೆಳೆಗಾರರು ಮೇಳದಲ್ಲಿ ಪಾಲ್ಗೊಂಡಿದ್ದು, ಗ್ರಾಹಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯದಲ್ಲಿ ಮಾವು ಬೆಳೆಗಾರರು ಈ ಬಾರಿ ಸಂಕಷ್ಟಕ್ಕೆ ಸಿಲುಕಿದ್ದು ಮಾರುಕಟ್ಟೆಗಳಲ್ಲಿ ನಿರೀಕ್ಷಿತ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ ನೆರೆಯ ಚಿಕ್ಕಬಳ್ಳಾಪುರದಲ್ಲಿ ಮಾವು ಬೆಳೆಗಾರರು ಬೆಂಬಲ ಬೆಲೆಗೆ ಒತ್ತಾಯಿಸಿ ಇತ್ತೀಚಿಗೆ ರಸ್ತೆಗೆ ಮಾವು ಸುರಿದು ಪ್ರತಿಭಟನೆ ನಡೆಸಿದ ಪ್ರಕರಣವೂ ನಡೆದಿದೆ. ಈ ಮಧ್ಯೆ ಮಾವು ಹಾಗೂ ಇನ್ನಿತರ ಹಣ್ಣುಗಳ ಬೆಳೆಗಾರರ ಹಿತದೃಷ್ಟಿ ಕಾಪಾಡುವ ನಿಟ್ಟಿನಲ್ಲಿ ಗ್ರಾಮಾಂತರ ಜಿಲ್ಲಾಡಳಿತ ಆಯೋಜಿಸುವ ವಿವಿಧ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ಕೇಳಿಬರುತ್ತಿದೆ.
ರಾಣಿ ಕ್ರಾಸ್‌ನಲ್ಲಿ ಮೇಳ: ದೇವನಹಳ್ಳಿ ತಾಲೂಕು ಹೋಟೆಲ್ ನಂದಿ ಉಪಚಾರ ಮುಂಭಾಗ (ನಂದಿ ಬೆಟ್ಟಕ್ಕೆ ಹೋಗುವ ರಸ್ತೆ, ರಾಣಿ ಕ್ರಾಸ್) ಆಯೋಜಿಸಲಾಗಿದ್ದು ಜೂ.13 ರಿಂದ 15 ವರೆಗೆ 3 ದಿನಗಳ ಕಾಲ ಮೇಳ ಇರಲಿದೆ. ಗ್ರಾಹಕರ ಸ್ಪಂದನೆ ಹಾಗೂ ಬೆಳೆಗಾರರು ಆಸಕ್ತಿ ಮೇಳೆ ಮತ್ತೊಂದು ದಿನ ವಿಸ್ತರಿಸುವ ಚಿಂತನೆಯೂ ಇದೆ. ಸಾರ್ವಜನಿಕರು ಕೂಡ ಗುಣಮಟ್ಟದ ವಿವಿಧ ತಳಿಯ ಹಣ್ಣುಗಳು ಹಾಗೂ ತಾಜಾ ಹಣ್ಣುಗಳನ್ನು ಒಂದೇ ವೇದಿಕೆಯಲ್ಲಿ ಖರೀದಿ ಮಾಡಲು ಉತ್ತಮ ಅವಕಾಶ ಇದಾಗಿದೆ.
ಮೇಳದಲ್ಲಿ ವಿವಿಧ ಹಣ್ಣುಗಳು: ತೋತಾಪುರಿ, ಸೇಂದೂರ, ಬಂಗನಪಲ್ಲಿ, ಬಾದಾಮಿ, ರಸಪೂರಿ, ಮಲ್ಲಿಕಾ, ಕೇಸರ್, ದಶೇರಿ, ಕುಲ್ ಪಂದ್, ಹಿಮಾಪಸಂದ್, ಮಲಗೋವ, ಸಕ್ಕರೆಗುತ್ತಿ, ಡ್ರಾಗನ್ ಪ್ರೋಟ್ಸ್(ಕೆಂಪು), ಸೀಬೆ(ತೈವಾನ್, ಅಲಹಾಬಾದ್), ಹಲಸು(ಪ್ಯಾಕೆಟ್)ಗಳು ಗ್ರಾಹಕರ ಗಮನ ಸೆಳೆದಿವೆ.
ಹಣ್ಣು ಖರೀದಿಸಿದ ಜನಪ್ರತಿನಿಧಿಗಳು: ಖುದ್ದು ಸಚಿವ ಕೆ.ಎಚ್.ಮುನಿಯುಪ್ಪ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಎಲ್ಲ ಮಳಿಗೆಗೆಳಿಗೆ ಭೇಟಿ ನೀಡಿ ರೈತರರೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ ವಿವಿಧ ತಳಿಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅವುಗಳ ರುಚಿ ಸವಿದು ಹಣ್ಣುಗಳನ್ನು ಖರೀದಿಸಿದರು. ಇದರೊಂದಿಗೆ ಜಿಲ್ಲಾಡಳಿತದ ಅಧಿಕಾರಿಗಳು ಪಾಲ್ಗೊಂಡು ಹಣ್ಣುಗಳನ್ನು ಖರೀದಿಸಿದರು.
ಗಮನ ಸೆಳೆದ ಸಸ್ಯಸಂತೆ:
ಮಾವು ಮೇಳದ ಜತೆಗೆ ಸಸ್ಯ ಸಂತೆ ಕಾರ್ಯಕ್ರಮವನ್ನು ಮೇಳದಲ್ಲಿ ಏರ್ಪಡಿಸಲಾಗಿದ್ದು ಜಿಲ್ಲೆಯ ಎಲ್ಲ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ವಿವಿಧ ಜಾತಿಯ ಹಣ್ಣಿನ ಸಸಿ ಗಿಡಗಳನ್ನು ಹಾಗೂ ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಇಡಲಾಗಿದೆ. ತೋಟಗಾರಿಕೆ ಇಲಾಖೆ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು ಬೆಂಗಳೂರು ಸೇರಿ ನಗರ ಹಾಗೂ ಪಟ್ಟಣ ಪ್ರದೇಶದ ಹಲವು ಗ್ರಾಹಕರು ವಿವಿಧ ಹಣ್ಣಿನ ಹಾಗೂ ಅಲಂಕಾರಿಕ ಸಸಿಗಳನ್ನು ಖರೀದಿಸಲು ಮುಗಿಬಿದ್ದಿರುವ ದೃಶ್ಯ ಕಂಡುಬಂದಿದೆ.