

ಯಲ್ಲಾಪುರ: ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ‘ಗ್ರಾಮಸ್ಥರ ನಡಿಗೆ ಗ್ರಾಮ ಪಂಚಾಯಿತಿ ಕಡೆಗೆ’ ಕಾರ್ಯಕ್ರಮದಡಿ ವಿದ್ಯುತ್ ಸಮಸ್ಯೆ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಸಂವಾದ ನಡೆಯಿತು.
ಮಾವಿನಮನೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ 17 ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲ. ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಹೆಸ್ಕಾಂ ಎಇಇ ರಮಾಕಾಂತ ನಾಯ್ಕ ಪ್ರತಿಕ್ರಿಯಿಸಿ, ನಿರಂತರ ಗಾಳಿ, ಮಳೆ, ಸಿಬ್ಬಂದಿ ಕೊರತೆ ಇತ್ಯಾದಿ ಕಾರಣಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬವಾಗುತ್ತಿದೆ ಎಂದರು.
ಗ್ರಾ.ಪಂ. ಅಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ ಮಾತನಾಡಿ, 17 ದಿವಸಗಳಿಂದ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದೇವೆ. ಇತ್ತೀಚೆಗೆ ನಡೆದ ಹೆಸ್ಕಾಂ ಗ್ರಾಹಕರ ಸಭೆಯಲ್ಲೂ ನಮ್ಮ ಸಮಸ್ಯೆ ಹೇಳಿಕೊಂಡಿದ್ದೇವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಗ್ರಾ.ಪಂಗೆ ಅಧಿಕಾರಿಗಳನ್ನು ಕರೆಸಿ, ಅಹವಾಲು ಸಲ್ಲಿಸುತ್ತಿದ್ದೇವೆ. ಶೀಘ್ರ ವಿದ್ಯುತ್ ಸಂಪರ್ಕ ಸಲ್ಲಿಸಬೇಕು. ನಮ್ಮ ಭಾಗಕ್ಕೆ ಸಂರ್ಪಸುವ ಹೆಗ್ಗಾರಘಟ್ಟದ ಮಾರ್ಗ ಹಾಗೂ ಗುಳ್ಳಾಪುರ ಮಾರ್ಗಗಳಲ್ಲಿ ಇರುವ ಎಲ್ಲ ಸಮಸ್ಯೆಗಳನ್ನು ನಿವಾರಿಸಬೇಕು. ಹೆಚ್ಚುವರಿಯಾಗಿ 3 ಲೈನ್ವುನ್ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆ ನೀಡಿದರು. 7 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ, 8ನೇ ದಿನ ಯಲ್ಲಾಪುರದ ಹೆಸ್ಕಾಂ ಕಚೇರಿ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಗ್ರಾ.ಪಂ. ಸದಸ್ಯ ದೀಪಕ ಭಟ್ಟ, ಹೆಸ್ಕಾಂ ಸೆಕ್ಷನ್ ಅಧಿಕಾರಿ ಲಕ್ಷ್ಮಣ ಜೋಗಳೆಕರ್ ಹಾಗೂ ಗ್ರಾಮಸ್ಥರು ಸಭೆಯಲ್ಲಿ ಇದ್ದರು.