

ಕೋಲಾರ: ಮಾವಿನ ಫಸಲಿಗೆ ನುಸಿ ರೋಗ ಮತ್ತು ಕೀಟ ಬಾಧೆ ಹೆಚ್ಚಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ರೈತರ ನೆರವಿಗೆ ಅಧಿಕಾರಿಗಳು ಮತ್ತು ಸರ್ಕಾರ ಬರುತ್ತಿಲ್ಲ. ರೋಗ ತಡೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಔಷಧ ಸಿಂಪಡಿಸಿದರೂ ಹತೋಟಿಗೆ ಬರುತ್ತಿಲ್ಲ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಪ್ರಕೃತಿ ವಿಕೋಪದಿಂದ ಈ ಬಾರಿ ಮಾವಿನ ಮರಗಳಲ್ಲಿ 2 ಹಂತಗಳಲ್ಲಿ ಹೂವು ಕಾಣಿಸಿಕೊಂಡಿದ್ದು, ಡಿಸೆಂಬರ್ ಮತ್ತು ಜನವರಿಯಲ್ಲಿ ಬಂದ ಹೂವಿನಲ್ಲಿ ಸ್ವಲ್ಪ ಫಸಲು ಕಾಣುವಂತಾದರೆ, ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಕಾಣಿಸಿಕೊಂಡ ಹೂವು ನೆಲಕ್ಕಚ್ಚಿದೆ.
ತಡವಾಗಿ ಹೂವು ಕಾಣಿಸಿಕೊಂಡ ಹಿಂದೆಯೇ ಮಾವಿನ ಮರಗಳಲ್ಲಿ ಚಿಗುರು ಕಾಣಿಸಿಕೊಂಡ ಕಾರಣ ನುಸಿರೋಗ ಮತ್ತು ಕೀಟಬಾಧೆಗಳು ಹೆಚ್ಚಾಗಿ ಪಿಂದೆಗೆ ತಗುಲಿ ಪಿಂದೆ ಬೆಳವಣಿಗೆ ಇಲ್ಲದೆ ಕೆಳಗೆ ಉದುರಿತು. ಮೊದಲನೇ ಹಂತದಲ್ಲಿ ಹೂವಿನಲ್ಲಿ ಕಚ್ಚಿದ ಕಾಯಿಗೆ ಯಾವುದೇ ರೋಗ ತಗುಲಲಿಲ್ಲ. 2ನೇ ಹಂತದಲ್ಲಿ ಕಾಣಿಸಿಕೊಂಡ ಹೂವಿನಲ್ಲಿ ಕಚ್ಚಿದ ಕಾಯಿಗೆ ನುಸಿರೋಗ ಮತ್ತು ಕೀಟಬಾಧೆ ತಗುಲಿ ಕಾಯಿಗಳು ಹಳದಿ ಬಣ್ಣಕ್ಕೆ ಬಂದು ಬೆಳವಣಿಗೆ ಇಲ್ಲದೆ ಮರಗಳಿಂದ ಬೀಳುವಂತಾಯಿತು ಇದರಿಂದ ಸಲು ನಿರೀೆಯಲ್ಲಿದ್ದ ಬೆಳೆಗಾರರಿಗೆ ದಿಕ್ಕೆ ತೋಚದಂತಾಗಿದೆ.
ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ತೋಟಗಳಿಗೆ ಭೇಟಿ ನೀಡಿ, ರೋಗ ಹತೋಟಿಗೆ ಕೆಲಸ ಮಾಡುತ್ತಿಲ್ಲ. ಈಗಾಗಲೇ 4 ರಿಂದ 5 ಬಾರಿ ಔಷಧ ಸಿಂಪಡಣೆ ಮಾಡಿದರೂ ನುಸಿರೋಗ ಹತೋಟಿಗೆ ಬರುತ್ತಿಲ್ಲ. ಈ ಬಾರಿ ಶೇ.20 ಫಸಲು ರೈತನ ಕೈ ಸೇರುವ ನಿರೀಕ್ಷೆಯೂ ಕೈ ತಪ್ಪಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ವಿಜ್ಞಾನಿಗಳನ್ನು ಕರೆಯಿಸಿ ರೋಗ ನಿವಾರಣೆಗೆ ಚಿಂತನೆ ಮಾಡಬೇಕಾಗಿದೆ.
-ಚಿನ್ನಪ್ಪರೆಡ್ಡಿ, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ
ಈಗಾಗಲೇ ವಿಜ್ಞಾನಿಗಳು ಜಿಲ್ಲೆಯ ಮಾವಿನ ತೋಟಗಳಿಗೆ ಭೇಟಿ ನೀಡಿ ರೈತರಿಗೆ ಅರಿವು ನೀಡುವ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನಿಗಳ ಪ್ರಕಾರ ನುಸಿರೋಗ ಸ್ವಲ್ಪ ಕಡಿಮೆಯಾಗಿದೆ. ಇದು ಚಿಗುರುನಿಂದ ಕಾಯಿಗೆ ತಗುಲಿ ಕಾಯಿ ಮೇಲಿನ ಚಿಪ್ಪನ್ನು ತಿಂದಿರುವುದರಿಂದ ಹಳದಿ ಬಣ್ಣಕ್ಕೆ ತಿರುಗಿ ಬೀಳುವಂತಾಗಿದೆ. ಉಷ್ಣಾಂಶ ಹೆಚ್ಚಾದ ನಂತರ ನುಸಿರೋಗವು ಕಡಿಮೆಯಾಗುತ್ತಾ ಹೋಗುತ್ತಿದೆ. ನುಸಿರೋಗ ಯಾವ ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಂತಹ ರೈತರು ಇಲಾಖೆಯ ಗಮನಕ್ಕೆ ತಂದು ವಿಜ್ಞಾನಿಗಳ ಸಲಹೆ ಪಡೆದು ಔಷಧ ಸಿಂಪಡಣೆ ಮಾಡಬೇಕು.
-ಕುಮಾರಸ್ವಾಮಿ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ