

ಶಿವರಾಜ ಎಂ. ಬೆಂಗಳೂರು
ಗ್ರಾಮಾಂತರ ಜಿಲ್ಲೆಯಲ್ಲಿ ಮಾವಿನ ಉತ್ತಮ ಇಳುವರಿಯ ನಿರೀಕ್ಷೆ ಗರಿಗೆದರಿದೆ. ಸುಮಾರು 4 ಸಾವಿರ ಹೆಕ್ಟೇರ್‌ನಲ್ಲಿ ಸಲು ಕಂಡುಬರುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಸರಿಸುಮಾರು 5940 ಟನ್ ಇಳುವರಿ ನಿರೀಕ್ಷೆ ಇದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ದ್ರಾಕ್ಷಿ ಸೇರಿ ಇನ್ನಿತರ ತೋಟಗಾರಿಕೆ ಬೆಳೆಗಳು ಮಾರುಕಟ್ಟೆಯಿಲ್ಲದೆ ನೆಲಕಚ್ಚಿರುವ ಸಂದರ್ಭದಲ್ಲಿ ಮೇ ಮೊದಲ ವಾರ ಆರಂಭವಾಗಲಿರುವ ಮಾವಿನ ಬೆಳೆಗೆ ಲಾಕ್‌ಡೌನ್ ಸಡಿಲಗೊಂಡು ಉತ್ತಮ ಮಾರುಕಟ್ಟೆ ಸಿಗಬಹುದೆಂಬ ಲೆಕ್ಕಾಚಾರ ಶುರುವಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ತೋತಾಪುರಿ ಮಾವು ಸುಗ್ಗಿ ಆರಂಭಗೊಂಡಿದ್ದು, ಮೇ ಕೊನೇ ವಾರದಿಂದ ಜೂನ್ ಮಧ್ಯಂತರದ ಬಳಿಕ ಮಲ್ಲಿಕಾ, ನೀಲಂ, ಬಾದಾಮಿ ಮತ್ತಿತರ ಸಲಿನ ಉತ್ತಮ ಇಳುವರಿ ಸಾಧ್ಯತೆ ಇದೆ.
ಬೆಳೆ ಹಾನಿಯಾಗಿಲ್ಲ: ಪ್ರತಿ ಬಾರಿ ಅಕಾಲಿಕ ಮಳೆ, ಬರಗಾಲದಿಂದ ನಿರೀಕ್ಷಿತ ಮಟ್ಟದಲ್ಲಿ ಸಲು ಬರುತ್ತಿರಲಿಲ್ಲ. ಈ ಬಾರಿ ಎಲ್ಲಿಯೂ ಮಾವು ಬೆಳೆ ಹಾನಿಯಾಗಿಲ್ಲ. ಲಾಕ್‌ಡೌನ್ ನಿಯಮ ಸಡಿಲಗೊಂಡರೆ ಬೆಳೆಗಾರರು ನಷ್ಟದಿಂದ ಪಾರಾಗಲಿದ್ದಾರೆ. ಲಾಕ್‌ಡೌನ್ ನಡುವೆಯೂ ತೋಟಗಾರಿಕೆ ಬೆಳೆಗಳ ಸಾಗಾಟಕ್ಕೆ ನಿರ್ಬಂಧವಿಲ್ಲ. ದೆಹಲಿ, ಕೋಲ್ಕತ, ಕೇರಳ ಹಾಗೂ ಆಂಧ್ರ ಪ್ರದೇಶಕ್ಕೆ ಹಣ್ಣುಗಳು ಸಾಗಣೆಯಾಗುತ್ತಿವೆ.
ಆನ್‌ಲೈನ್ ಮಾರಾಟ: ಮಾವು ಉತ್ತೇಜಿಸಲು ಹಾಗೂ ಮಾರುಕಟ್ಟೆ ವಿಸ್ತರಿಸಲು ಆನ್‌ಲೈನ್ ಸೇವೆಗೆ ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ. ಪೋಸ್ಟಲ್ ಸೇವೆ ಮೂಲಕ ತಾಜಾ ಮಾವಿನ ಹಣ್ಣು ಸವಿಯಲು ಗ್ರಾಹಕರಿಗೆ ಅವಕಾಶ ಕಲ್ಪಿಸಿದೆ. ಲಾಕ್‌ಡೌನ್ ನಡುವೆಯೂ ಆನ್‌ಲೈನ್ ವಹಿವಾಟು ರೈತರಿಗೆ ವರದಾನವಾಗಲಿದೆ ಎನ್ನಲಾಗಿದೆ.
ಸಂಪರ್ಕ ಸೇತು: ಈಗಾಗಲೇ ಮಾವು ಬೆಳೆಗಾರರು ಹಾಗೂ ಟ್ರೇಡರ್ಸ್ ನಡುವೆ ಸಂಪರ್ಕ ಸೇತುವೆವಾಗಿ ತೋಟಗಾರಿಕೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಎಲ್ಲೆಲ್ಲಿ ವರ್ತಕರಿದ್ದಾರೆ ಎಂಬುದರ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯಾಂಗೋಪಲ್ಪ್‌ಗೆ ಮಾತುಕತೆ: ಮಾವಿನ ಹಣ್ಣಿನಿಂದ ಮ್ಯಾಂಗೋಪಲ್ಪ್ ತಯಾರಿಸುವವರೊಂದಿಗೆ ತೋಟಗಾರಿಕೆ ಇಲಾಖೆ ಮಾತುಕತೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾವು ಮೇಳಕ್ಕೆ ಚಿಂತನೆ: ಕಳೆದ ಬಾರಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ದೇವನಹಳ್ಳಿಯಲ್ಲಿ ತೋಟಗಾರಿಕೆ ಇಲಾಖೆ ಆರಂಭಿಸಿದ ಮಾವು ಮೇಳ ಯಶ ಕಂಡಿತ್ತು. ಗ್ರಾಹಕರು ಹಾಗೂ ಬೆಳೆಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಈ ಬಾರಿಯೂ ದೊಡ್ಡಮಟ್ಟದಲ್ಲಿ ಮಾವು ಮೇಳ ಆರಂಭಿಸಲು ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ.
ಜಿಲ್ಲೆಯಲ್ಲಿ ಮಾವು ಬೆಳೆ ಉತ್ತಮ ಇಳುವರಿ ನಿರೀಕ್ಷೆ ಇದೆ. ಜೂನ್ ಮಧ್ಯಂತರದಲ್ಲಿ ಉತ್ತಮ ಸಲು ಬರಲಿದ್ದು, ಉತ್ತಮ ವಹಿವಾಟು ನಡೆಯುವ ಸಾಧ್ಯತೆ ಇದೆ. ಪ್ರಸಕ್ತ ಸಾಲಿನಲ್ಲಿ 6 ಸಾವಿರ ಟನ್ ಇಳುವರಿ ನಿರೀಕ್ಷೆ ಇದೆ. ಮಹಾಂತೇಶ್ ಮುರುಗೋಡ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಬೆಂ.ಗ್ರಾಮಾಂತರ