ಮುಂಜಾಗ್ರತೆಯೊಂದಿಗೆ ಮಾವು ಮಾರಾಟಕ್ಕೆ ಅವಕಾಶ, ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಮಾಹಿತಿ

26-klr-18
Published on

ಕೋಲಾರ: ಕರೊನಾ ಆತಂಕದ ನಡುವೆಯೂ ರೈತರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಂಡು ಶ್ರೀನಿವಾಸಪುರದಲ್ಲಿ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಡಿಸಿ, ಜಿಪಂ ಸಿಇಒ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಶಾಸಕರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ಸುಮಾರು 6 ವಾರಗಳ ಕಾಲ ಮಾವು ವಹಿವಾಟು ನಡೆಯಬಹುದು ಎಂದರು.

ಈ ಬಾರಿ ಫಸಲು ಕಡಿಮೆ ಇದ್ದು, 2.36 ಲಕ್ಷ ಟನ್ ಸರಕು ಮಾರುಕಟ್ಟೆಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ 1.36 ಲಕ್ಷ ಟನ್ ಮಾವು ಸಂಸ್ಕರಣಾ ಘಟಕಕ್ಕೆ ಹೋಗುತ್ತದೆ. ಉಳಿದ ಮಾವು ಮಾರಾಟವನ್ನು ದಿನಕ್ಕೆ ಇಷ್ಟು ಎಂದು ನಿಗದಿಗೊಳಿಸಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಲಾರಿ ನಿಲುಗಡೆಗೆ ಪ್ರತ್ಯೇಕ ಜಾಗ: ಹೊರ ರಾಜ್ಯದ ಲಾರಿಗಳಿಗೆ ಅವಕಾಶ ನೀಡುವುದಿಲ್ಲ. ಈಗಾಗಲೆ ಬೆಂಗಳೂರಿನ ಲಾರಿ ಮಾಲೀಕರ ಸಂಘದೊಂದಿಗೆ ಮಾತನಾಡಿದ್ದು, ಹೊರ ರಾಜ್ಯದ ಲಾರಿಗಳಿಗೆ ಪ್ರವೇಶ ನೀಡದಂತೆ ಚೆಕ್‌ಪೋಸ್ಟ್ ಬಿಗಿಗೊಳಿಸಲಾಗುವುದು ಎಂದರು.

ದಿನಕ್ಕೆ ಸುಮಾರು 160 ಲಾರಿ ಬರಲಿದ್ದು, ಲಾರಿ ನಿಲುಗಡೆಗೆ 10 ಎಕರೆ ಪ್ರತ್ಯೇಕ ಜಾಗ ಗುರುತಿಸಲಾಗಿದೆ. ಲಾರಿ ಚಾಲಕರು, ಕ್ಲೀನರ್‌ಗಳು ಅಲ್ಲೇ ಇರಬೇಕು, ಅವರಿಗೆ ಅಲ್ಲೇ ಊಟ, ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಬರುವ ಮುಂಚೆಯೇ ಚಾಲಕರು, ಕ್ಲೀನರ್‌ಗಳ ಮಾಹಿತಿ ನೀಡಬೇಕು, ಪಾರ್ಕಿಂಗ್ ಜಾಗದಿಂದ ಯಾವಾಗ ಬರಬೇಕು ಎಂದು ಧ್ವನಿವರ್ಧಕದ ಮೂಲಕ ಸೂಚಿಸಿದ ನಂತರ ಆ ಲಾರಿ ಮಾತ್ರ ಮಾರುಕಟ್ಟೆಗೆ ಬಂದು ಮಾವು ಲೋಡ್ ಮಾಡಿಕೊಂಡು ಸಾಗಬೇಕು ಎಂದರು.

ಸೋಂಕಿನ ಪ್ರಕರಣ ಮಾರುಕಟ್ಟೆ ವ್ಯಾಪ್ತಿಯಲ್ಲಿ ಕಂಡು ಬಂದರೆ 2 ದಿನ ವಹಿವಾಟು ಬಂದ್ ಮಾಡಿ ನಂತರ ಸೋಂಕು ನಿವಾರಕ ಔಷಧ ಸಿಂಪಡಿಸಿ ಮತ್ತೆ ಆರಂಭಿಸಲಾಗುವುದು ಎಂದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಮಾರುಕಟ್ಟೆಗೆ ಯಾವ ರೈತರು ಮಾವು ತರಬೇಕು ಎಂಬುದನ್ನು ತಿಳಿಸಲು ಶಿಕ್ಷಕರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರೈತರಿಗೆ ಮಾಹಿತಿ ಒದಗಿಸಲಿದ್ದಾರೆ. ಯಾವ ರೈತರು ಯಾವ ದಿನ ಮಾವು ಕಟಾವು ಮಾಡಬೇಕು ಎಂಬುದನ್ನು ಇವರು ನೀಡುವ ಮಾರ್ಗದರ್ಶನದಂತೆ ಮಾಡಿ ಮಾರುಕಟ್ಟೆಗೆ ತರಬೇಕು ಎಂದರು.

ಪ್ರತಿದಿನ 7ರಿಂದ ಮಧ್ಯಾಹ್ನ 11ರವರೆಗೆ ಮಾತ್ರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಯಾವುದೇ ಅವಘಡ ಸಂಭವಿಸದಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಮುನ್ನಚ್ಚರಿಕೆ ಕೈಗೊಳ್ಳಲಿದೆ ಎಂದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಪೂರ್ಣಪ್ರಮಾಣದ ವಹಿವಾಟು ಮೇ 30ರಿಂದ ಆರಂಭಗೊಳ್ಳಲಿದ್ದು, ಲಾರಿ ಚಾಲಕರು, ಕ್ಲೀನರ್‌ಗಳಿಗೆ ಪಾಸ್ ನೀಡಲಾಗುವುದು, ಅವರಿಗೆ ನೀಡುವ ನಂಬರ್ ಪ್ರಕಟಿಸಿದ ನಂತರವೇ ಆ ಲಾರಿ ಮಾರುಕಟ್ಟೆ ಪ್ರವೇಶಿಸಬೇಕು ಎಂದರು.

ಟ್ರೇಡರ್ಸ್‌ ಎಪಿಎಂಸಿ ಹಾಗೂ ತಾಲೂಕು ಆಡಳಿತದ ಬಳಿ ನೋಂದಣಿ ಮಾಡಿಸುವುದು ಕಡ್ಡಾಯ. ಇದೇ ಸಂದರ್ಭದಲ್ಲಿ ಆನ್‌ಲೈನ್ ಮಾರಾಟಕ್ಕೂ ಅವಕಾಶ ನೀಡಲಾಗಿದೆ ಎಂದರು.

ಸೋಂಕು ಪತ್ತೆಯಾದರೆ ಅಗತ್ಯ ಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ, ಕ್ವಾರೆಂಟೈನ್‌ಗೆ ಛತ್ರಗಳನ್ನು ವಶಕ್ಕೆ ಪಡೆಯಲಾಗಿದೆ, ಸಮಸ್ಯೆ ಎದುರಾಗದಂತೆ ವ್ಯಾಪಾರಿಗಳು, ಮಂಡಿ ಮಾಲೀಕರು, ರೈತರು ಸಹಕಾರ ನೀಡಬೇಕು ಎಂದರು.

ಶಾಸಕ ಕೆ.ಸ್ರೀನಿವಾಸಗೌಡ, ಅಪರ ಡಿಸಿ ಬಿ. ಶಿವಸ್ವಾಮಿ, ಜಿಪಂ ಸಿಇಒ ಎಚ್.ವಿ.ದರ್ಶನ್, ಎಸ್ಪಿ ಕಾರ್ತಿಕ್ ರೆಡ್ಡಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಗಾಯತ್ರಿ, ಕೋಲಾರ ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್, ಮಾವು ಬೆಳೆಗಾರರ ಸಂಘದ ಅಧ್ಯಕ್ಷರು ಪಾಲ್ಗೊಂಡಿದ್ದರು.

ಜಿಲ್ಲೆಯ ಮಾರುಕಟ್ಟೆಗಳಿಗೆ ಹೊರ ರಾಜ್ಯದ ಮಾವು ಬರಲು ಅವಕಾಶ ನೀಡುವುದಿಲ್ಲ. ನಮ್ಮ ರೈತರ ತೋಟಗಳಿಂದ ಬರುವುದಕ್ಕೆ ಆದ್ಯತೆ. ಬರುವ ಲಾರಿಗಳಿಗೆ ಸೋಂಕು ನಿವಾರಕ ಔಷಧ ಸಿಂಪಡಣೆ ಮಾಡಿಯೇ ಮಾರುಕಟ್ಟೆಯೊಳಗೆ ಬಿಡಲಾಗುವುದು. ಎಚ್.ನಾಗೇಶ್, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net